ಭಾನುವಾರ, ಆಗಸ್ಟ್ 16, 2015

ಅ........

ಅಪರೂಪದ ಆಲಿಂಗನಗಳ
ಆಹ್ವಾನದ ಆಕಾಂಕ್ಷೆಗೆ
ಅನುದಿನವು
 ಆಕರವೀಯುತ್ತಿದ್ದೇನೆ ..,
ಅಪರೂಪಕ್ಕಾದರು
ಆಗಮನವಾಗಲಿ ,
ಆಕ್ರಂದಿಸುವ ಆತ್ಮ,
ಅಂಗಾತವಾಗುವ ಆಮಿಷಕ್ಕೆ
ಆವಿಯಾಗುವ  ಅಂತರದಲ್ಲಿ
ಅಂಗಾತವಾಗಿದೆ ....,



ಮಂಗಳವಾರ, ಏಪ್ರಿಲ್ 7, 2015

Meet me !

Meet me ,
For one last time ,
How long
 we shall strand
Across the wall ?
Let's
Switch souls ,
For one last time !
what
appears shall
disappear ,
What's heard shall
Mute ,
What floats shall
Settle finally ..
There shall
Be a fusion ,
Soul that sowed
Differences
Shall merge ...
Come let's
switch souls ,
Let love alone
persist
eternally ,
Meet me ,
for one last time

ವಿರಹಿ

ಮಂಜು ಹಾಸಿನ
ಮೇಲೆ ಮಡುಗಟ್ಟಿ
ಕೂತು 
ಬಂದವರ 
ಆರಾಧಿಸುವ
ಮಂದಿ ಇಲ್ಲಿ
ಬನ್ನಿ ..,
ವಿಚಾರದ
ಪರಿಧಿಗೆ
ನಿಲುಕದ
ವಿರಹಿಯೋಬ್ಬನ
ವೈರಾಗ್ಯಕ್ಕು
ಹೊಸದೊಂದು
ಹೆಸರು ತನ್ನಿ ...

ಗುರುತು

ಹೋದವಳ 
ಚಪ್ಪಲಿಯ 
ಹಿಲ್ಡಿನ
ಗುರುತುಗಳು ,
ಜೀವದ 
ಮೇಲೆಲ್ಲ ..

ಸಂಚಾರಿ

ಇರದ
ಕರುಳ ಬಳ್ಳಿಯ
ನಿನ್ನ ಕಂಡಾಗ
ತುಂಡರಿಸಿದೆ ,
ನೀ ಹೋದ ಮೇಲೆ
ಕಾದ ನನಗು ,
ಇರದ ನಿನಗೂ,
ಹರಿವ
ಕಬ್ಬಿಣದಂತ
ಬೆಸುಗೆಯಾ ಅವಿರ್ಭವ frown emoticon
ನೀ ನಡೆಯುವ
ದಾರಿ
ಗೊತ್ತುಮಾಡಿದ ನಾ
ಉಡಾಪೆ ಸಂಚಾರಿ ,
ಒಮ್ಮೆ ನೀ
ಮುಂದಾಗಿದ್ದರೆನಿಸಿ
ಶೀಘ್ರ ಪಥ ಸಂಚಲನ ,
ಮತ್ತೊಮ್ಮೆ
ನೀ
ಹಿಂದಾಗಿದ್ದರೆನ್ನಿಸಿ
ಶೈಶವದ
ತಾಳ್ಮೆ ,
ಈಗೆ ನಡೆದಿದೆ
ಔಪಚಾರಿಕ ಕದಲಿಕೆ ,
ನಿನ್ನ ಗಡಿಯಾರದ
ಮುಳ್ಳುಗಲೊನ್ದಿಗೆ
ಸ್ನೇಹವಿರಬೇಕ್ಕಿತ್ತು ,
ಅವ ನೊಡಿ
ಕದಲುವ ನಿನ್ನ
ಕದಲಿಕೆಯ ಸಾಮ್ಯತೆಗೆ !!
ಗಡ್ಡ ನೆರೆತಿದೆ ,
ಉರಿವ ಸೂರ್ಯ
ನನ್ನ ವಿಸರ್ಜಿಸುವ
ಮುನ್ನ ಉದ್ಭವಿಸು ,
ಈ ದಾರಿಗೆ ನಿನ್ನ
ಹೆಸರಿಟ್ಟು
ಕಳೆದು ಹೋಗುವೆ !!

ಮಾಲಿ

ಕೆಂಪು ಗುಲಾಬಿ
ನಿನ್ನಗೆ ಉಪಮೆ ,
ಕಂಪು ಮಲ್ಲಿಗೆ
ಕೂಡ .,
ಹೂದೋಟದ
ಮಾಲಿಯಗುವರ
ಪಟ್ಟಿಯಲ್ಲಿ
ಕೊನೆಯ ಹೆಸರೊಂದು
ಖಾಲಿ ಬಿಡು .,
ಮೂಡಿವ
ಭಾಗ್ಯವಿಲ್ಲ ,
ಬಿಡಿಸಿ ಮಾಲೆ
ಕಟ್ಟುವ
ಕೈಯಾದರು
ಸಾಕು , ,

ಮಂಗಳವಾರ, ಮಾರ್ಚ್ 31, 2015

ಸುಳ್ಳು ಮತ್ತು ವಾಸ್ತವ !

ಈ ಮಳೆ ,
ಆ ಸಮಾದಿಯ
ಮೇಲಿನ
ಒಣ ಹೂವಗಳಿಗೆ 
ಸುಳ್ಳೇ ಆಶ್ವಾಸನೆ
ನೀಡಿತ್ತು  ..
ಬಹುಶ: ,
ಮಣ್ಣ ಒದ್ದು
ಮಲಗಿದವನಿಗೂ ,
ಸುಳ್ಳೆ ... !

ವಾಸ್ತವ!!

ಅವನ ಹೂಳುವಾಗ
ಕಿತ್ತಿಟ್ಟ ಒಂದೆರಡು
ಪಾರ್ಥೆನಿಯುಮ್
ಗಿಡಗಳು ಮತ್ತೆ
ಚಿಗುರುತ್ತಿವೆ ,
ಸಮಾಧಿ ಇನ್ನಷ್ಟು
ಭದ್ರವಾಗಿದೆ ,
ಶ್ರದಾಂಜಲಿಗೆ
ಬಂದವರ ಹೆಜ್ಜೆ
ಗುರುತು ಸಂಪೂರ್ಣ
ಮಾಸಿದೆ ...

ಹೂಳುವವರೋ,
ಹೊಸ ಹಳ್ಳ
ತೋಡಿ ,
ಆಹ್ವಾನ ಪತ್ರಿಕೆ
ಮುದ್ರಿಸಿದ್ದಾರೆ ,







ಬುಧವಾರ, ಮಾರ್ಚ್ 25, 2015

ಮಂಗಳವಾರ, ಮಾರ್ಚ್ 10, 2015

ಹೊಸದೊಂದು ಜನ್ಮ

ಮೇಜಿನ ಮೇಲಿನ ನಾಲಕ್ಕು ಖಾಲಿ ಹಾಳೆ ನನ್ನ ಅರ್ಥ ಮಾಡಿಕೊಂಡ ಅಹಮ್ಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹೊರಳುತ್ತವೆ , ನೀಳವಾದ ಉಸಿರು ನನಗೆ ಅರಿವಿಲ್ಲದಂತೆ ನನ್ನ ಬಿಟ್ಟು ದೂರ ಸರಿಯುತ್ತದೆ , ಕಿಟಕಿಯ ಆಚೆ ದಿಟ್ಟಿಸಿ ಮುಗಿದ ಮಳೆಯ ಅವಶೇಷಗಳ ನಡುವೆ ತೊಯ್ದ ಅಂಗವಿಕಲ ತರೆಗೆಲೆಗಳ ಅಸಹಾಯಕತೆ , ನಿಶ್ಚಲತೆ ಚೆಡಿಸಿದನ್ತಾಗಿ ದೃಷ್ಟಿ ಒಳಗೆ ಎಳೆದುಕೊಂಡು ನಿರ್ಲಿಪ್ತನಾಗುತ್ತೇನೆ ... ಎದುರಿನ ಗೋಡೆಗೆ ಮುಪ್ಪಾದಂತಿದೆ ,ಅಲ್ಲಲ್ಲಿ ನೇತು ಹಾಕಿದ ಹಳೆಯ ಫೋಟೋಗಳು , ನಾನು ಬೇಡವೆಂದು ಕಿತ್ತಿಟ್ಟ ಫೋಟೋಗಳು ಉಳಿಸಿ ಹೋದ ಮೊಳೆಗಳ ಗುರುತು , ಮೈಯೆಲ್ಲಾ ಗಾಯದ ಗುರುತ್ತಂತೆ ಎಡೆದು ಹೋದ ಸುಣ್ಣದ ಚಕ್ಕೆಗಳು , ಮತ್ತೆ ಇವು ನನ್ನ ನಾಳೆಯ ನೆನಪಿಸಿದೆ ....... ನಾನು ಖಾಲಿಯಾಗದ ಭಾವದ ಒರತೆಯಾಗಿದೆ , ಹರಿಯುತ್ತಾ ಸದಾ ತುಳುಕುತ್ತಿದೆ ಇಂದೇಕೆ ಹೀಗೆ ಖಾಲಿ ಭಾವ ? ಕನ್ನಡಕ ಹುಡುಕಿ ಮುಖಕ್ಕೆ ನೀರು ತಾಕಿಸಿ ಮೇಲೆದ್ದು , ಮನೆಯೆಲ್ಲ ಹುಡುಕಿ ಇಲ್ಲಿ ಬಂದವರ , ಇದ್ದವರ , ಹೋದವರ ಎಲ್ಲರ ನೆನಪು ತರಿಸುವ ಎಲ್ಲ ನಿಗೂಡ ಗುರುತುಗಳ ಹುಡುಕಿ ಸುಟ್ಟಿದೇನೆ , ಬಣ್ಣದಂಗಡಿಯಿನ್ದ ಹೊಸದಂದು ಬಣ್ಣ ಆರಿಸಿ ತಂದಿದ್ದೇನೆ , ಒಂದಷ್ಟು ಸೀಮೆಂಟ್ ಬಳಿದು ನಂತರ ಇಲ್ಲಿ ಬಣ್ಣ ಬದಲಿಸಿ ನನ್ನ ಶೈಥಿಲ್ಯದ ಸೂಚ್ಯದಂತ ಮನೆಯ ವಾಸ್ತು ಬದಲಿಸುತ್ತೇನೆ ... ನನ್ನ ಮನೆಯ ನಡುವಲ್ಲಿ ಇದ್ದ ಉದ್ದದ ಕನ್ನಡಿಯ ಹೊರಗಾಕ್ಕಿದ್ದೇನೆ ... ಈಗ ಇಲ್ಲಿ ಹೊಸದೊಂದು ಜನ್ಮವಾಗಿದೆ , ಇವನಿಗೆ ನೆನ್ನೆಯಿಲ್ಲ , ನಾಳೆಯಿಲ್ಲ , ಪರಿಚಯಸ್ತರಿಲ್ಲ , ಕಲಿತ ವಿದ್ಯೆಗಳೆಲ್ಲವನ್ನು
ತೊಳೆದ ಮೇಲೆ ಒಂದಷ್ಟು ಖಾಲಿ ಹಾಳೆಯ ಮೇಲೆ ಅಕ್ಷರಾಭ್ಯಾಸ ನಡೆಯುತ್ತಿದೆ ...

ಸೋಮವಾರ, ಮಾರ್ಚ್ 9, 2015

ಸಂಗಾತ

ಸಂಗಾತ ಅಂಗಾತವಾಗಿದೆ
ಮುಂಗುರಳ ಕಂಪನ ,
ಅಂಗೈಯ ನಡುಕ
ಉಸಿರ ಕುರುಹಿಗೆ
ಎದೆಯ ಸಂಚಲನ,
ಈಗೆ ಬದುಕ ಪ್ರತಿಫಲಿಸೋ
ಸೂಕ್ಷ್ಮ ಹುಡುಕಿ ಹುಡುಕಿ
ಹೆಣ ಕಾಯುತ್ತಿದೇನೆ ....
ಬಾಯಾರಿದೆ , ಕಣ್ಣಿಗೂ ದಾಹ ,
ಉಸಿರು ಎದೆಯ ತಲುಪುವ
ಮುನ್ನ ಗಂಟಲಲ್ಲಿ ನಲುಗುತ್ತದೆ ...
ಈ ಸ್ಮಾಶನದ ಮುದುಕ
ಎರಡು ಹಳ್ಳ ತೆಗೆದಿದ್ದಾನೆ
ದೂರ ನಿಂತು ನನ್ನ ನೋಡಿ
ಮರುಗುತ್ತಾನೆ .....
ಅವ ನನ್ನಲ್ಲಿ
ಸಾವಿನ ಕುರುಹು
ಕಂಡಿದ್ದಾನೆ ..,,

ಪ್ರೀತಿ!

ಸುಡಲು ವಿರಹವಿತ್ತು ನಡುವೆ ,
ಪ್ರತಿ ಭೇಟಿಯಲಿ ಪ್ರೀತಿಗೆ ಪುನರುತ್ಥಾನದಿ 
ಸಾಕಾರ,
ಒಟ್ಟಿಗೆ ಬದುಕುವ ದಾಸ್ಯ ಒದಗಿ
ಪ್ರೀತಿ ಇನ್ನು ಉತ್ಕಲನದ ವಿಚಾರ

ಚಂದ್ರ ಮತ್ತು ಅವಳು !

ದಡಗಳ ನೇವರಿಸಿ ,
ಹರಿವ ನದಿಯಂತ ಅವಳು 
ಹೋದಮೇಲೆ ,
ಸಾಲು ಸಾಲು ಮರಗಳ 
ಒತ್ತರಿಸಿ ಓಡುವ 
ಟಾರ್ ರಸ್ತೆಯ ಮಧ್ಯೆ ,
ಚಂದ್ರ ಸ್ಥಿರವಾಗುತ್ತಾನೆ ....
ಈ ರಸ್ತೆ ಅವನ ಪ್ರತಿಫಲಿಸುವುದಿಲ್ಲ ,
ಅವನಿಗೆ ಮಂಪರು ಹಚ್ಚುವಂತೆ
ತೂಗುವುದೂ ಇಲ್ಲ ,
ಮುಂಜಾನೆಯವರೆಗೂ ಕಾದು
ಸೂರ್ಯನಲ್ಲಿ ದೂರುತ್ತಾನೆ ,,
ಮರುದಿನ ಇಲ್ಲಿ ಜೋರು
ಮಳೆ ..,
ಇರುಳಿನ ತಿಳಿ ಆಗಸದ ಕೆಳಗೆ
ಪ್ರೀತಿ ಉಕ್ಕುತ್ತಿದೆ .....!!
ಇಲ್ಲೊಂದು ಹೊಸಾ ನದಿ

 ಚಂದ್ರನ ತೂಗುತ್ತಿದೆ !!

ಕೋರಿಕೆ

ಉಸಿರು ದಾರಿ ಸವೆಸಿದಷ್ಟು ಹೊತ್ತು ಬದುಕ ಕಾಲಿಗೆ ನಿನ್ನ ಹೆಜ್ಜೆ ಗುರುತು ಮೂಡಿಸುವ ನೈತಿಕತೆ ಮೆರೆಯುತ್ತೇನೆ , ನಾ ನಡೆದು ಹೋದಲ್ಲಿ ಜನ ನಿನ್ನ ಶ್ಲಾಘಿಸುತ್ತಾರೆ , ಪ್ರೇಮದ ಹೆಸರಲ್ಲಿ ನಿನಗೆ ಮಾಡಿಕೊಟ್ಟ ಕರಾರುಗಳಲ್ಲಿ ಒಂದಷ್ಟು ಪೂರೈಸಿ ಪ್ರಾಯಶ್ಚಿತ ಮಾಡಿಕೊಳ್ಳುವ ನನ್ನ ಗರ್ವಕ್ಕೆ ಭುಜ ತಟ್ಟಿದ ಮೇಲೆ , ಕಲ್ಪನೆಯ ಕಣ್ಣಿಗೆ ಇಂಕು ತುಂಬಿ ನಿನ್ನ ಮತ್ತೆ ಬರೆಯುತ್ತೇನೆ ... ನಿನ್ನ ಕಣ್ಣಲ್ಲಿ ನನ್ನಗಾಗಿ ಕರುಣೆ ಹುಡುಕುತ್ತೇನೆ , ಅಲ್ಲಿ ಇನ್ನು ಮುಗಿಯದ ತಿರಸ್ಕಾರ ಕಂಡು ಕಣ್ಣ ರೆಪ್ಪೆ ಅಲುಗಿಸಿ ಮತ್ತೆ ನಿನ್ನ ಪಾದಗಳ ಹಣೆಗೆ ಕಟ್ಟಿಕೊಂಡು ನಾವಿಬ್ಬರು ಒಟ್ಟಾಗಿ ನಡೆದಲ್ಲಿ ಆಕಾಶ ಮಾರ್ಗವಾಗಿ ಮತ್ತೊಮ್ಮೆ ಗಿರಕಿ ಹೊಡೆಯುತ್ತೇನೆ ....
ಈಗೆ ಸಾಗುವ ರಾತ್ರಿಗಳು ಬದುಕಿನ ಅರ್ಧ ನುಂಗಿವೆ , ಇನ್ನರ್ಧ ಬದುಕ್ಕಿನುದ್ದಕ್ಕೂ ದಿನಗಳಲ್ಲಿ ಕಂಡ ಬೆಳಕ ಭದ್ರಮಾಡಿಕೊಂಡಿದ್ದೇನೆ , ನಿನ್ನ ಕಣ್ಣಲ್ಲಿ ನಾನು ಪ್ರತಿಫಲಿಸಿದ ರಾತ್ರಿಯ ನಂತರ
ಇಲ್ಲಿ ಬೆಳಕಿನ ಹಬ್ಬ .. ಸೂರ್ಯ ಚಂದ್ರರಿಗೆ ಶಾಶ್ವತ ರಜೆ ಇತ್ತು ನೀನು ಬೆಳಗಬೇಕು ..ನಮ್ಮಿಬ್ಬರ ನೆರಳು ಸೂರ್ಯನ ಜೊತೆಗೆ ಬೆಳೆಯುವುದು ಬೇಡ ,ಕಳೆಯುವುದು ಬೇಡ ...
ಒಂದನ್ನೊಂದು ಆಲಂಗಿಸಿ ಸ್ಥಿರವಾಗಲಿ , ಅನಂತ ಆಗಸಗಳಲ್ಲಿ ನಮ್ಮ ಆತ್ಮೈಕ್ಯ ಚಿರಾಯುವಾಗಲಿ .. ಉಸಿರ ದಾರಿ ಸವೆಯುವ ಮುನ್ನ ಸಮಾಧಿಯಾಗುವ ನನ್ನ ಕೋರಿಕೆ ಕೇಳಿಸಿಕೋ !!!!

ಸೋಮವಾರ, ಮಾರ್ಚ್ 2, 2015

ಮಳೆ

ಮುಗಿದ ಮಳೆ
ಸೆರೆಗಿಡಿದು
ಎಳೆ ಬಿಸಿಲು ,.
ನೆಲಕ್ಕೀಗ
ನವ ಪ್ರೇಮಿಯ
ವಿರಹ ,
ಸ್ವಲ್ಪ ತಾಪ   ,
ಸ್ವಲ್ಪ ತಂಪು  

ಬುಧವಾರ, ಫೆಬ್ರವರಿ 25, 2015

ರೈಲು

ಹಿಂದಿನ ಬೋಗಿಯಲ್ಲಿ ನಾನು
ಅವಳು ಮುಂದಿನ  ಬೋಗಿಯಲ್ಲಿ
ಇರುವ ಸುಳಿವು ..
ರೈಲಿನ  ಕ್ರಾಸಿಂಗಿಗೆ ಕಾದು 
ಕಿಟಕಿಯಾಚೆ ಕಣ್ಣು ತೂರಿಸಿ
ಅವಳ ಹುಡುಕುತ್ತೇನೆ ...
ಇಲ್ಲ , ಆಕೆ ಕಾಣುತ್ತಿಲ್ಲ :(

ಈಗೇ ತಿರುವು ಕಾದು ಕಾದು
ಕಣ್ಣು ಸೋಲುತ್ತಿದೆ ,..


ಇದ್ಯಾವುದೋ ಅಜ್ಞಾತ
ನಿಲ್ದಾಣದಲ್ಲಿ ಇಳಿದಿದ್ದೇನೆ ..,

ಇಲ್ಲಿ ರೈಲೇ ಬರುತ್ತಿಲ್ಲ !!
ಈಗ ಯಾವುದಾದರು
ರೈಲು ಸಿಕ್ಕರೂ ಸಾಕು

ಅವಳ ಘಮ ಸಂಪೂರ್ಣ
ಇಳಿದಿದೆ ,

ಕಾಲದ ಹಾದಿ ಸವೆಸಬೇಕಿದೆ  ..




ಶುಕ್ರವಾರ, ಫೆಬ್ರವರಿ 20, 2015

ಆಸ್ತಿಕತೆ ಒಳ್ಳೇದು !!

ದೇವರ ನಂಬಿಕೆ , ಹುಡುಕಾಟ , ಸಾವ ಭಯ ಹಾಗು ಅದರೆಡಗಿನ  ತಿರಸ್ಕಾರ ಮನುಕುಲವನ್ನು  ಬಿಟ್ಟು ಬಿಡದೆ ಕಾಡಿದ , ಕಾಡುತ್ತಿರುವ , ಕಾಡುವ ಪ್ರಶ್ನೆಗಳು .ನಮ್ಮಲ್ಲಿ  ಎಲ್ಲಾ  ತತ್ವಗಳು ನಾಸ್ತಿಕತೆ ಮತ್ತು ಆಸ್ತಿಕತೆಯ ನಡುವೆಯೇ ಹಂಚಿಹೊಗಿವೆ . ನನ್ನ ಸ್ನೇಹಿತನೊಬ್ಬನ ಚಿಂತನೆಯಂತೆ ದೇವರು ಒಂದು ಬಗೆಹರಿಸಲಾರದ ಸಮೀಕರಣ , ಸಾಮಾನ್ಯರಿಗೆ ದೇವರ ಹುಡುಕಾಟದ ವಾಂಛೆ ಹುಟ್ಟಿದರೆ ಇಡಿ ಜೀವಮಾನ ಅವರು ಅದರ ಸುತ್ತ ತಿಣುಕಾಡುತ್ತಾರೆ , ಸೋಲುತ್ತಾರೆ , ಗೆಲ್ಲುತ್ತಾರೆ , ಬೀಳುತ್ತಾರೆ , ಏಳುತ್ತಾರೆ ಆದರೆ ಅವರು ಓಡಿ ಹೋಗುವುದ್ದಿಲ್ಲ , ಬಿರುಬಿಸಿಲಿನಲ್ಲಿ ನಿಲ್ಲುತ್ತಾರೆ ,  ಚಳಿಯ ಕೊರೆತ , ಮಳೆಯ ಬೀಸು , ಸಾವ ಕಳವು , ರೋಗ, ಮುಪ್ಪು ಹಸಿವು  ಮ್ ಮ್ ! ಯಾವುದು ಅವರ ಕಾಲ ಕೆಳಗಿನ ನೆಲ ಕಸಿಯಲಾರದು ಸಾಯುವ ಕಡೆಯ ಕ್ಷಣದವೆರೆಗೂ , ನಂಬಿಕೆ ನೀಡುವ ಅಭಯ ಅದರಲ್ಲೂ ದೈವದ್ದು ಅತೀ ದೂರ ಸಲಹುತ್ತದೆ.

ಇದಕ್ಕೆ  ಮೂಲ ಎಲ್ಲಿಂದ ಮನುಕುಲದ ಬೌದ್ದಿಕ ಪರಾಮರ್ಶೆ ಗಳು ಅಂದರೆ ವಿಜ್ಞಾನದ ಪರಿಧಿ ಎಲ್ಲಿ  ಮುಗಿಯುವುದೋ ಅಲ್ಲಿಂದ ದೈವದ ಅರಿವಿಕೆ ಮತ್ತು ವ್ಯಾಪ್ತಿಯ ಅವಲೋಕನ ಶುರುವಾಗುತ್ತದೆ , ಅದು ಹೇಗೆ ಮುಂದುವರೆಯುತ್ತದೆ , ಹೇಗೆ ಮುಗಿಯುತ್ತದೆ ಇದು ಅವರವರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟ ಸತ್ಯ  .

ಅನಂತಮೂರ್ತಿಯವರು ಒಮ್ಮೆ ಯಾವುದೋ ಸಂದರ್ಶನದಲ್ಲಿ ಹೇಳಿದ್ದು ನೆನಪು ದೇವರ ನಂಬಿದ ಅಥವಾ  ಹಾಗೆ ಅಂದು ಕೊಳ್ಳುಲು  ಪ್ರಯತ್ನಿದ  ಕೂಡಲೇ ಇಡಿ ಬದುಕಿನೆಡಗಿನ ದೃಷ್ಟಿಕೋನ ಮತ್ತು ಬದುಕುವ ರೀತಿ  ಬದಲಾಗುವುದು !! ಇದು ಅಕ್ಷರಶ: ನಿಜ , ದೇವರ ನಂಬದವರಿಗೆ ನೈತಿಕತೆ ಕೇವಲ ಮಾಡುವ ಕೆಲಸಕ್ಕೆ ಬೇಲಿಯಾದರೆ , ನಂಬಿದವರಿಗೆ ಭಾವನೆಗಳ, ಯೋಚನೆಗಳ ಸುತ್ತ ನೈತಿಕತೆ ಗಸ್ತು ತಿರುಗುತ್ತದೆ . ಒಂದು ವಿಧದಲ್ಲಿ ನೈತಿಕ ಸರಹದ್ದು ಮನಸ್ಸಿನ ಮಟ್ಟಿಗೆ ಇದ್ದರೆ ವ್ಯಕ್ತಿತ್ವ ಪಕ್ವವಾಗಬಹುದಾ ?? ಗೊತ್ತಿಲ್ಲ , ಆದರೆ ನಮ್ಮೊಳಗೇ ಬಿಟ್ಟು ಬಿಡದೆ ಒಂದು ಸಮರ ನಡೆಯುವುದಂತು ದಿಟ . ಎಷ್ಟೋ ಬಾರಿ ಮತ್ತೊಬ್ಬರೊಟ್ಟಿಗೆ , ಸಮಾಜದೊಟ್ಟಿಗೆ ಆಡುವ ಯುದ್ದಗಳಿಂದ ಹಾಗುವ ಹಾನಿಗಿಂತ ವಾಸಿ ಈ ಮನಸ್ಸು ಮತ್ತು ಬುದ್ದಿಯ ಕಾಳಗ.

ಇಲ್ಲಿ ನಾನು ಬಳಸಿದ ದೈವದ ಮೂರ್ತಕ್ಕೆ ಧರ್ಮದ ಅಂಕುಶ ಇಲ್ಲ , ರಾಮಕೃಷ್ಣರ ಮಾತಂತೆ ಎಲ್ಲ ಧರ್ಮಗಳು ಒಂದೇ ಗುರಿಯ ತಲುಪಲು ಹೋರಾಟ ಬೇರೆ ಬೇರೆ ರಸ್ತೆಗಳ?? ಇರಬಹುದು ಮನುಷ್ಯರೆಲ್ಲರಲ್ಲೂ  ಇರುವ ಸಾಮ್ಯ ಇದಕ್ಕೆ  ಸಾಕ್ಷ್ಯದಂತಿರುವುದನ್ನು ಅಲ್ಲಗೆಳೆಯಲಾರೆ . ಅವರೇ ಹೇಳಿದಂತೆ ತಾಯಿ  ಒಂದೇ ಪದಾರ್ಥದಲ್ಲಿ ತನ್ನ ಕುಟುಂಬದ ಪ್ರತಿಯೊಬ್ಬರಿಗೂ   ಮಾಡುವ ಅನನ್ಯ  ಭಕ್ಷ್ಯಗಳಂತೆ ಧರ್ಮ?? ಇರಬಹುದು , ಮತ್ತೆ ಅದೇ ಅವರವರ ಭಾವಕ್ಕೆ , ಅವರವರ ಭಕುತಿಗೆ .

ನಾನೇಕೆ  ಈ ವಿಷಯವಾಗಿ  ಇಷ್ಟೊಂದು ಹೇಳಿದೆ ??!  ನಾನು ನಂಬಿಕೆಯನ್ನು ಪ್ರತಿಪಾದಿಸುತ್ತಿಲ್ಲ , ಅಥವಾ ನಾಸ್ತಿಕತೆಯನ್ನು ಈಗಳೆಯುತ್ತಿಲ್ಲ . ನಾನು ಇತೀಚಿಕೆ ಎದುರುಗೊಂಡ ಕೆಲವು  ಘಟನೆಗಳ  ಬಗ್ಗೆ ವಿವರಣೆಗೆ ಮಾಡಿಕೊಂಡ ಸಣ್ಣ ಪೀಠಿಕೆ ಇದಷ್ಟೆ .

ಮೊದಲೆನೆಯದು .....

ಅವರು ಸುಮಾರು ೬೦ ವಯಸ್ಸಿನವರಿರಬಹುದು , ದಿನ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಹತ್ತುತ್ತಲೋ ಇಳಿಯುತ್ತಲೋ , ಲಲಿತ ಸಹಸ್ರ ನಾಮ ಓದುತ್ತ ಸಿಗುತ್ತಾರೆ . ತುಂಬಾ ಸಲ ನೋಡಿದ ಮೇಲೆ ಅವರೆಡೆಗೆ ಸಣ್ಣ ಕುತೂಹಲ ಮೂಡಿತು . ಕಳೆದ ವಾರ ಬೆಟ್ಟ ಇಳಿದು ಊರ ಕಡೆಗೆ ಹೊರಟಾಗ ದಾರಿಯಲ್ಲಿ ಅವರನ್ನು ಕಂಡೆ . ಸುಮ್ಮನೆ ನೋಡಿದೇ , ಮತ್ತೆ ಅವರ ಮಾತಾಡಿಸಲು ಸಂಕೋಚ , ಅವರೇ ಮಾತಾಡಿಸಿದರೆ ಸರಾಗ ಎಂದೆಣಿಸಿ ಅವರಿಗೆ ಹಿಂದಾಗಿ  ಒಂದೆರಡು ಹೆಜ್ಜೆಯಷ್ಟು ಜಾಗ ಕೊಟ್ಟು ನಡೆಯತೊಡಗಿದೆ . ಒಂದು ನೂರು ಮೀಟರು ನಡೆಯುಷ್ಟರಲ್ಲಿ ಅವರಿಗೆ ನನ್ನ ಬಗ್ಗೆ ಏನನಿಸಿತೋ ಏನೋ ತಿರುಗಿ ನೋಡಿ ಪರಿಚಯದ ನಗೆ ನಕ್ಕರು , ಅಷ್ಟಕ್ಕೇ ಕಾಯುತ್ತಿದ ನಾನು ಅವರನ್ನು ಮಾತಿಗೆಳೆದೆ .

"ನೀವು  ಇಲ್ಲೇ ಇರ್ತೀರಾ  ? ನಿಮ್ಮನ  ಇಲ್ಲೇ ಸುಮಾರ್ ಸಲಿ ನೋಡಿದೀನಿ " ನಾನು ಕೇಳಿದೆ . "ಹೌದು , ನಾನು ಇಲ್ಲೆಯೆ ಇರೋದು , ತಾಯಿ ನೋಡಕೆ ದಿನಾ ಬರ್ತೇನೆ  , ನೀನು?"   ತಮಿಳು  ಮಿಶ್ರಿತ ಕನ್ನಡಲ್ಲಿ  ಕೇಳಿದರು  , ನಾನು ಸಣ್ಣ ಹಾಗುವ ಭ್ರಮೆಗೆ ಬಿದ್ದು ಈ  ಬೆಟ್ಟ ಕಳೆದ ಆರು ವಾರದಿಂದ ಹತ್ತುತ್ತಿರುವುದಾಗಿಯು ಭಕ್ತಿ ಇನ್ನು ನೆತ್ತಿಗೆರಿಲ್ಲವೆಂದು ನಗೆ  ಬೀರಿದೆ . ನಂತರ ತನಗೆ ಕನ್ನಡದಲ್ಲಿ ಮಾತು ಕಷ್ಟವೆಂದು  ಇಂಗ್ಲಿಷಿಗೆ ಭಾಷೆ ಬದಲಿಸಿದ ಅವರು ನನ್ನ ಬಗ್ಗೆ  , ನನ್ನ ಕೆಲಸದ ಬಗ್ಗೆ ವಿಚಾರಿಸಿದರು .
ನಂತರ ನನ್ನ ಆತ್ಮ ಕಥನಗಳ ಕುತೂಹಲಕ್ಕೆ(  ಅಥವಾ ದೇವರ ಹುಡುಕಾಟದ ಬಗ್ಗೆ ಇರುವು ಕುತೂಹಲಕ್ಕೋ ಕಾಣೆ !) ಅವರ  ಬಗ್ಗೆ ಕೇಳಲಾರಮ್ಬಿಸಿದೆ .

ಅವರ ಹೆಸರು ಎಂತದೋ(ಮರೆತೇ! ) , ಪಾಲಕಾಡಿನ ಅಯ್ಯರ್ ಬ್ರಾಹ್ಮಣರೆಂದು ಹೇಳಿಕೊಂಡರು.  ಕಳೆದ ಮೂವತ್ತು ವರುಷ ಮುಂಬೈಯ ಯಾವುದೊ ಕಂಪನಿಯ ಕೆಲಸ , ಬದುಕಿನ ನೀರಸತೆಗಳು , ಈಗೆ  ತಮ್ಮ  ಮೂಲ ಬಿಚ್ಚಿಟ್ಟರು . ಕೊನೆಗೆ ಒಂದು ದಿನ ದೇವಿಯ ಕರೆ ಬಂದಂತೆ ಆಯಿತಂತೆ , ಅಲ್ಲಿಗೆ ಮುಂಬೈ ಮತ್ತು ಅಲ್ಲಿನ ತಮ್ಮ ಲೌಕಿಕ ಬದುಕಿನ ಅಂಟು ,ಆಸ್ತಿ , ಬಂಧುಗಳು ಎಲ್ಲ ತೊರೆದು  ಬಂದರಂತೆ . ಮೊದಲಿಗೆ ಕೊಲ್ಲೂರಿನಲ್ಲಿ ನೆಲೆಸಿ  ೯ ತಿಂಗಳು ಪೂಜೆ , ಜಪ ತಪಗಳಲ್ಲಿ ಲೀನವಾಗಿ ನಂತರ ಮೈಸೂರಿಗೆ ಬಂದಿದ್ದಾರೆ . ಇಲ್ಲಿ ಕಳೆದ ೫ ವರುಷಗಳಿಂದ ಬೆಟ್ಟದ ತಪ್ಪಲಿನ ದತ್ತ ಆಶ್ರಮದಲ್ಲಿ ಕೆಲವು ವರ್ಷ ಇದ್ದು  ಅಲ್ಲಿ ಆಶ್ರಮಜೀವನ  ದುಸ್ತಾರವಾಗಿ ಆಶ್ರಮ ಬಿಟ್ಟರಂತೆ . ಸಧ್ಯಕ್ಕೆ  ಯಾರದೋ ಮನೆಯಲ್ಲಿ ಪೇಯಿಂಗ್ ಗೆಸ್ಟಾಗಿ  ಇದ್ದಾರಂತೆ .
ಪ್ರತಿ  ದಿನ ಬೆಟ್ಟ ಹತ್ತಿ ದೇವಿಯ ದರ್ಶನ ಮಾಡುವುದು , ಲಲಿತ ಸಹಸ್ರನಾಮ ಜಪಿಸುವುದು ಇದು ನಿತ್ಯ ಕಾಯಕ  , ಇಲ್ಲಿ ದಿನಾಲೂ ಬರುವ ಪ್ರೇಮಿಗಳಿಗೆ , ವಾಯು ವಿಹಾರಿಗಳಿಗೆ ಇವರದು ತೀರ ಪರಿಚಿತ ಮುಖ .

ಮಾತು  ಮುಂದುವರೆಸಿ " ಹೆಂಡತಿ ಮಕ್ಕಳು ಸಂಸಾರ ?"ಎಂದೇ , "ಇಲ್ಲ , ಬದುಕ ಜಂಜಾಟಗಳ  ಮಧ್ಯೆ ಅದಕ್ಕೆ ಸಮಯವಾಗಲಿಲ್ಲ " ಎಂದರು .  ನಾನು ಅವರ ಸ್ವಾತಂತ್ರ , ಬಂಧಮುಕ್ತ ಬದುಕು ಮತ್ತು ಅದರ ಸ್ವೆಚೆಗೆ ಹೊಟ್ಟೆ ಕಿಚ್ಚು ಪಟ್ಟು "ಪುಣ್ಯವಂತರು  , ನೀವೇ  " ಎಂದೇ , ಯಾಕೋ ಒಂದೆರಡು ಸೆಕೆಂಡು  ಮೌನವಾದರು ನಂತರ  "ಬಂಧನಗಳು ಇರಬೇಕು  , ಬದುಕಿಗೆ ಒಂದು ಮಾನ್ಯತೆ ಇರುತ್ತದೆ "  ಅಂದರು .ನಾನು   ಗೊಂದಲಕ್ಕೆ ಬಿದ್ದೆ  ಯಾವ ಎಕಾಂತವಿದ್ದರೆ ಜೀವನದ ಅರ್ಥದ ಉತ್ಕಲನ ಸುಲಭ ಎಂದು ಭಾವಿಸಿ ಹಾತೊರೆಯುವವೆವೋ  ಆ ಏಕಾಂತವೂ , ಒಂಟಿತನವಾಗಿ , ನೀರಸವಾಗಿ ಕಾಣುವುದು ನನಗೆ ನೋವುಂಟು ಮಾಡಿತ್ತು .

ನಂತರ ಅವರು ಈ  ದಿನಗಳ ಮದುವೆ , ಸಂಬಂದಗಳ  ದೌರ್ಬಲ್ಯಗಳ  ಬಗ್ಗೆ ಕೆಲವು ತಮ್ಮದೇ ವ್ಯಾಖ್ಯಾನಗಳ  ನೀಡಿದರು . ತಮ್ಮ ಧ್ಯಾನ ,ಜಪ ತಪ, ಸಂಸ್ಕೃತದ  ಶಬ್ದದಿಂದ ಉಂಟಾಗುವ ಬೌದ್ದಿಕ ಬದಲಾವಣೆಗಳು , ಹೇಗೆ ಸಂಸ್ಕ್ರತದ ಅಕ್ಷರಗಳು ತುಂಬಾ ಶಕ್ತ ಎಂಬುವುದನ್ನು ಹೇಳಿದರು , ಇಂಗ್ಲಿಷಿನ " 7 habbits of highly effective people "ನ ಕೆಲವು ಉಲ್ಲೇಖಗಳನ್ನು  ಹೇಳಿ ಬದುಕು ಮತ್ತು ಅದರ  ಸಾರ್ಥಕ್ಯ ಎಷ್ಟು ಮುಖ್ಯ ಎಂದು ವಿವರಿಸಿದರು . ನಾನು ತೀರ ಉತ್ಸುಕನಾಗಿ ಮಾತಿಗೆಳದದ್ದು ಅವರಿಗೆ ಹಾಗಿರಬಹುದಾದ ದೈವಾನುಭುತಿಯ ಬಗೆಗಿನ ಕುತೂಹಲಕ್ಕೆ  ಆದರೆ ಅದನ್ನು ಹೇಗೆ ಕೇಳುವುದು ?? ಮುಜುಗರವಾಯಿತು  (ನನ್ನ ಪ್ರಕಾರ ಪ್ರತಿಯೊಬ್ಬರ  ಆಸ್ತಿಕತೆ  ,ನಾಸ್ತಿಕತೆಯ  ಮೂಲ ನಂಬಿಕೆಗಳು  ತೀರ ವೈಯುಕ್ತಿಕ !) , ಮಾತು ಮುಂದುವರೆಸಿದೆ .ಸುಮಾರು ಅರ್ಧ ಗಂಟೆ  ಅವರೊಡೆಗಿನ ಸಂವಾದ ಬರಿ ಲೌಕಿಕ ಹಾಗು ಹೋಗುಗಳ ಬಗ್ಗಿನ ಚರ್ಚೆಯಲ್ಲೆ ಕಳೆದೆ . ಕೊನೆಗೆ ಅವರೇ  ತಾವು ನಿದಿರೆಯಲ್ಲೂ ಹೇಗೆ ಜಪದಲ್ಲಿ ತಮ್ಮನು ತೊಡಗಿಸಿಕೊಂದಿರುವರೆಂದು , ಇನ್ನು ಕೆಲವೇ ವರುಷದಲ್ಲಿ ತಮ್ಮಗೆ ತಮ್ಮ  ಸಾಧನೆಗೆ ಪ್ರತಿಫಲ ದೊರಕಬಹುದೆಂದು ಹೇಳಿಕೊಂಡರು .
ಸಾಧನೆಯ ಹಾದಿಯಲ್ಲಿರುವ ಅವರಿಗೆ ಅಭಿನಂದಿಸಿ ಹೊರಡಲು ಅನುವಾದೆ , ನಂತರ  ಏನೋ ನೆನಪಾಗಿ  "ಊಟ  , ತಿಂಡಿ ಹೇಗೆ ??" ಎಂದೇ , "ನಾನು  ಯಾರನ್ನು  ಬೇಡುವುದಿಲ್ಲ , ಕೇಳುವುದಿಲ್ಲ , ಯಾರಾದರು ಏನಾದರು ಕೊಟ್ಟರೆ ಊಟ , ಇಲ್ಲವಾದರೆ ಹಸಿವು " ಎಂದರು  , ಅವರ  ಬಗ್ಗೆ ಹೆಮ್ಮೆ ಎನ್ನಿಸಿತು ಅವರ ಕೈಗೆ ಸಣ್ಣದೊಂದು ಮೊತ್ತವಿತ್ತು ಅವರ ಸಾಧನೆಗೆ ಶುಭ ಕೋರಿ ಅಲ್ಲಿಂದ  ಹೊರಟೆ .

ಮತ್ತೊಂದು  ಘಟನೆ ...

ಮೊನ್ನೆ ಬೆಳಗಿನ್ನ ರೈಲಿನನಲ್ಲಿ   ಬೆಂಗಳೂರಿಗೆ ಹೊರಟ್ಟಿದೆ , ಮಂಡ್ಯಾದಲ್ಲಿ ಹತ್ತಿದ ಒಬ್ಬ ಹುಡುಗ ಅಣೆಯಿಂದ ಮೂಗಿನಾರ್ಧದವರೆಗೆ ಒಂದು ನೀಳ ನಾಮಧರಿಸಿದ್ದ , ಬಿಳಿಯ ಬಟ್ಟೆ, ಕೈಯಲ್ಲಿ ಜಪ ಮಣಿಯ ಸಣ್ಣ ಕೈಚೀಲ , ತುಂಡು ಹೇರ್  ಕಟ್ ಒಂದು ವಿದವಾಗಿ  ಆ  ಬಾಲಕನ  ಮುಖದಲ್ಲಿ ಏನೋ  ಕಳೆ . ಪಕ್ಕದಲ್ಲಿ ಸೀಟಿನಲ್ಲಿದ ಒಬ್ಬ  ಹೆಂಗಸು ಆ  ಹುಡುಗನ ಕುರಿತು "ನೀನು ಜೋತಿಷ್ಯ ಹೇಳುತೀಯ ??"  ಎನ್ನುವವರೆಗೂ  ನಾನು  ಅವನನ್ನು  ಗಮನಿಸಿರಲೇ ಇಲ್ಲ . ಆಕೆಯ  ಕೆಲಿಗೆ ಭಯಗೊಂಡ ಬಾಲಕ " ಇಲ್ಲ ಇಲ್ಲ " ಎಂದು ನಿಟ್ಟುಸಿರು ಬಿಟ್ಟ .
ಮತ್ತೆ ನಾನು  ಅವನ ನೋಡಿ  ಪರಿಚಯದ ನಗೆ ಬೀರಿ "ಏನು  ಓದುತ್ತಿದಿಯ ?" ಎಂದೇ , ಆತ  "ಪ್ಯರಾಮೆಡಿಕಲ್ , ಮಂಡ್ಯದಲ್ಲಿ " ಅಂದ  . "ಎಸ್  ಎಸ್  ಎಲ್ ಸೀ ಯ ನಂತರವ " ಕೇಳಿದೆ , "ಇಲ್ಲ, ಪೀ ಯು ಸೀ " ಅಂದ . "ಇದೇನು ವೇಷ?ಕಾಲೇಜಿಗೂ ಈಗೇ  ಹೋಗ್ತಿಯ ?" ಅಂದೆ . "ಇಲ್ಲ , ಬೇರೆ ಸಮಯದಲ್ಲಿ ಮಾತ್ರ " ಅಂದ . "ಯಾವ ಮಠ ? " ಅಂದೆ . "ಇಸ್ಕಾನ್ " ಅಂದ . "ಮಂಡ್ಯಾದಲ್ಲು  ?  "  ಅಂದೆ ,  "ಹೌದು  , ವಿದ್ಯಾನಗರದಲ್ಲಿ , ಸಧ್ಯಕ್ಕೆ  ಮನೆಯಲ್ಲಿ ದೇವಸ್ಥಾನ  ಇದೆ , ಅಲ್ಲೇ  ಪೂಜೆ , ವಾಸ  ಎಲ್ಲ , ಈಗ ೪ ಎಕ್ಕರೆ ಜಮೀನು ಯಾರೋ ಕಲಹಳ್ಳಿಯಲ್ಲಿ ಕೊಟ್ಟಿದ್ದಾರೆ  " ಎಂದ . "ಎಷ್ಟು  ವಯಸ್ಸು ? " ಅಂದೇ  , "೧೭"  ಅಂದ . ನೋಡಲು  ಸುಮಾರು ೧೪ರ    ಹಾಗೆ ಕಾಣುವ ಅವನ ವಯಸ್ಸು ಕೇಳಿ ಆಶ್ಚರ್ಯವಾದದ್ದಂತು  ನಿಜ . " ಹೇಗೆ ? ಇದೆಲ್ಲ , ಎಷ್ಟು ವರ್ಷ ?" ಅಂದೆ . "ನನ್ನ  ಅಕ್ಕನಿಂದ  ಒಮ್ಮೆ  ಬೆಂಗಳೂರಿನ  ಶೇಷದ್ರಿಪುರಮ್ಮಿನ್ನಲಿ ಜಗನಾಥ ಮಂದಿರಕ್ಕೆ ಕರ್ಕೊಂಡು ಹೋದರು ಆಗಲಿಂದ ನಾನು ನಿಯತವಾಗಿ  ಕೃಷ್ನಾರಾಧನೆಯಲ್ಲಿ ನಿರತನಾಗಿದ್ದೇನೆ , ಈಗ  ೧೩ ವರುಷ ಒಟ್ಟು "  ನಾನು  ಅವಕ್ಕಾದೆ ", " ಮುಂದೆ ?" ಕೇಳಿದೆ . "ನನ್ನದೇ  ಒಂದು ದೇವಸ್ಥಾನ ಕಟ್ಟಬೇಕು , ಮುಂದಿನ ತಿಂಗಳು ಮಾಯಪುರಕ್ಕೆ ಹೋಗುತ್ತೇನೆ , ಅಲ್ಲಿ  ೬ ತಿಂಗಳು ಪೂಜಾ ವಿಧಿ ವಿಧಾನ ಕಲಿಸುತ್ತಾರೆ , ಮತ್ತೆ  ಅಲ್ಲೇ  ಬ್ರಹ್ಮಚಾರ್ಯ ತೆಗೆದುಕೊಳ್ಳುತ್ತೇನೆ " ಅಂದ , ನಾನು "ಮದುವೆ ? " ಅಂದೆ . "ಬ್ರಹ್ಮಚಾರ್ಯ ಅಂದೆ ಸನ್ಯಾಸ  ಅಲ್ಲ " ಅಂದ  . ನಾನು " ಓಹ್ !" ಎಂದು ಸುಮ್ಮನಾದೆ . ""ನಿನಗೆ , ಹೇಗೆ ಅನ್ನಿಸಿತು , ಹೀಗಾಗಬೇಕು ಎಂದು , ಏನು ಇಡಿದಿಡುತ್ತದೆ ನಿನ್ನನ್ನು  ಇಲ್ಲೇ ?" ಕೇಳಿದೆ . "ನಾನು , ಮೊದಲ ಬಾರಿ ದೇವಸ್ಥಾನಕ್ಕೆ ಹೋದಾಗಲೇ ಆ ಭಾವ ಮೂಡಿತು ಹಾಗಾಗಿ ಅಲ್ಲೇ ನೆಲೆಯೂರಿದೆ , ಭಗವದ್ಗೀತೆ ಎರಡು  ಮೂರು ಬಾರಿ ಓದಿದ ಮೇಲೆ ಇದರ ಹೊರತು ಬೇರಾವುದು ಹಿತವಿಲ್ಲ ಎನ್ನಿಸಿ , ಭಗವದ್ ಚಿಂತನೆಯಲ್ಲೇ ತೊಡಗಿಸಿಕೊಂಡಿದ್ದೇನೆ  " ಅಂದ . "ಏನು  ಕಲಿತೆ , ಗೀತೆಯಿಂದ ??" ಅಂದೆ  , ಆತ  ನನ್ನಿಂದ ಈ  ಪರಿಯ ವಿಚಾರಣೆ ಅಪೇಕ್ಷಿರಲಿಲ್ಲ ಎಂದು ಕಾಣುತ್ತದೆ ಕೊಂಚ ಕಸಿವಿಸಿಯದಂತೆ ಕಂಡ ನಂತರ "ನಾನು ಯಾವ  ಕಾರಣಕ್ಕೆ  ಇಲ್ಲಿ ಹುಟ್ಟಿದ್ದೇನೆ  ಎಂದು ತಿಳಿದಿದೆ ಅದಕ್ಕೆ  ಗೀತೆ  ಕಾರಣ  " ಎಂದ  . ಅಲ್ಲಿಗೆ  ನಿಟ್ಟುಸಿರು  ಬಿಟ್ಟು ನನ್ನ  ಪ್ರಶ್ನೆಗಳನ್ನು  ನಿಲ್ಲಿಸಿದೆ .

ಆತ  ಶ್ರೀರಂಗಪಟ್ಟಣದಲ್ಲಿ  ಇಳಿದು ಒಂದು ಬ್ಯಾಗಿನ ತುಂಬಾ ಇದ್ದ ಭಗವದ್ಗೀತೆಯ  ಪುಸ್ತಕಗಳ್ಳನ್ನು  ಇಡಿದು "ಗೋಸಾಯಿ  ಘಾಟ್ ಬಳಿ ,  ಗೀತೆ  ಮಾರಲು  ಹೋಗ್ತಿದೀನಿ " ಅಂತ  ಹೇಳಿ  ಇಳಿದು  ಹೋದ . ಇಳಿದ  ಮೇಲು  ಕಿಟಕಿಯಿಂದ ನನ್ನ ಕಡೆ  ಕೈ, ಬೀಸಿ ನಕ್ಕು  ಹೊರಟ , ನಾನು  ಅವನು ಹೋದ ದಾರಿಯ ಕಡೆ  ನೋಡುತ್ತ ಕೂತೆ , ರೈಲು  ಆತನ  ವಿರುದ್ದ ದಿಕ್ಕಲ್ಲಿ  ತನ್ನ   ಪಾಡಿಗೆ ಹೊರಟಿತು  .


ಈ ಎರಡು  ಘಟನೆ ನನ್ನನ್ನು ಒಂದೇ ಬಗೆಯಾಗಿ ಕಾಡುತ್ತಿವೆ , ದೇವರ ಬಗ್ಗೆಗಿನ ಕುತೂಹಲಕ್ಕೆ ಜೀವನವ  ಮುಡುಪಾಗಿಟ್ಟ ಬಾಲಕ ಮತ್ತು ದೇವರನ್ನು  ಪಡೆದೆ ತೀರುತ್ತೇನೆ ಎಂಬ ಆ  ವೃದ್ಧರ ಅಚಲತೆ ಎರಡು ವಿಶಿಷ್ಟ .
ಇಂತಹವರು  ಕೇವಲ ಉದಾಹರಣೆ ಅಷ್ಟೆ  , ಇಂತಹವರು  ಸಾವಿರಾರು ಮಂದಿ  , ನಮ್ಮ  ನಿಮ್ಮ  ಮಧ್ಯೆ ಕಾಣಸಿಗುತ್ತಾರೆ . ಇವರೆಲ್ಲರಲ್ಲೂ  ಒಂದು  ಶ್ರದ್ದೆಯಿದೆ , ತಾಳ್ಮೆಯಿದೆ , ಶಿಸ್ತು , ಸ್ಥಿರತೆಯಿದೆ  . ಅವರು  ಹುಡುಕ್ಕುತ್ತಿರುವುದು ಅವರಿಗೆ  ದೊರಕಲಿ ಎಂದು ಆಶಿಸುತ್ತ ನನ್ನ ಈ  ಸಣ್ಣ  ಲೇಖನ  ಮುಗಿಸುತ್ತೇನೆ . ಒಟ್ಟಾರೆ ಯಾವ ಕಾರಣಕ್ಕಾದರೂ  ಸರಿ , ವಿಜ್ಞಾನ , ಸಿನಿಮಾ , ಮಾಡುತ್ತಿರುವ ವೃತ್ತಿ, ಕುಟುಂಬ    ಯಾವುದಾದರು  ಸರಿ ಅದಕ್ಕೆ  ಜೀವನವ  ಮುಡುಪಾಗಿಡುವುದಕ್ಕೆ  ಒಂದು  ಗುಂಡಿಗೆ  ಬೇಕು , ಆ  ಗುಂಡಿಗೆಗೆ  ನನ್ನದೊಂದು  ನಮನವಿರಲಿ .



ಆಸ್ತಿಕತೆ  ಒಳ್ಳೇದು









ಮಂಗಳವಾರ, ಫೆಬ್ರವರಿ 17, 2015

ಸಮಾಧಿ

ಅವಳ  ಮುಂಗುರುಳ
ಧ್ಯಾನವಾಗಿ
ಅನುಸರಿಸಿ  ...
ಹತ್ತಿ , ಇಳಿದು
ಸುರುಳಿ  ಸುತ್ತಿ ..
ಕಣ್ಣೋಟ ಸುಳಿಯಾಗಿ ,
ಮ್ ..!
ನಾನು
ಸಮಾಧಿ .......!!



ಭಾನುವಾರ, ಫೆಬ್ರವರಿ 15, 2015

ಉಪಾಯ!

ಬರೆಯಲೇಬೇಕಾದ
ಅನಿವಾರ್ಯತೆಗೆ ಸಿಕ್ಕಂತೆ
ಕೆಲವೊಮ್ಮೆ ಭಾವ ಮೂಡಿ ,
ಅಟ್ಟದಲ್ಲಿ ಅವಿತಿಟ್ಟ ಎದೆಗೆ
ಇಕ್ಕಳವಿರಿದು  ಮುಳ್ಳಿನಂತ
ನಿನ್ನ  ನೆನಪ ಹುಡುಕುತ್ತೇನೆ,
ಕೆದಕಿ ಮಾಡಿಕೊಂಡ ರಾಡಿಯ
ಹೊರತು ಮತ್ತೇನು ??
ಈ  ಗಾಯಕ್ಕೆ ರಕ್ತಸ್ರಾವವು ಇಲ್ಲ,
ಈ ಕಣ್ಣ ಗೂಡಲ್ಲಿ ತೇವವೂ  ಇಲ್ಲ ,
ಮತ್ತೆ ಅಟ್ಟಕ್ಕೆ ಎದೆಯ ಸೇರಿಸಿ ,
ಪೆನ್ನ ಮುಚ್ಚಳ ಮುಚ್ಚುತ್ತೇನೆ .

ಮುಂಚೆಲ್ಲಾ
ನಿನ್ನ ನೆನಪಾದಾಗಲೆಲ್ಲ ಕಣ್ಣಿರು ಹರಿದು
ನಾನು ಹಗುರಾಗುತ್ತಿದೆ ,
ಸ್ವಲ್ಪ ಮಾಗಿದಂತಾದೆ
ಕಣ್ಣಿರು ಬಂದಾಗ ಮಾತ್ರ
ನೀನು ನೆನಪಾಗುತ್ತಿದೆ ,
ನಂತರದಲ್ಲಿ ಯಾಕೋ
ಕಣ್ಣೀರಿಗೆ  ಬರವಾಗಿತ್ತು :(
ಗಾಳಿಗೆ ಕಣ್ಣೊಡ್ಡುವುದು ,
ಬೆಳಕಿಗೆ  ಕಣ್ಣೊಡ್ಡುವುದು,
ಒಟ್ಟಾರೆ ಕಣ್ಣಿರು , ನಿನ್ನ ನೆನಪು
ಜೋಡಿಯಾಗಿ ಬರುವಂತದೊಂದು
ಉಪಾಯ ಕಂಡುಕೊಂಡೆ !!!

ಈಗ ಬರೆಯಲ???

ಮ್ .. !


ಮುಚ್ಚಿಟ್ಟ ಪೆನ್ನ
ಪಕ್ಕಕ್ಕೆ ಸರಿಸಿ
ಕಾಗದಕ್ಕೆ ಕಣ್ಣಿರು
ಹರಿಸಿದೆ ಸಣ್ಣದೊಂದು
ಕವನ .. :-)
ಕಣ್ಣಿರು ಆರುವವರೆಗೂ
ಕಾದು ,
ನನ್ನ ಡೈರಿಗೆ ಆ ಕಾಗದ ಅಂಟಿಸಿ
ನಿದ್ದೆ ಹೋದೆ  ...!


ಬೆಳಕ ಮುಂದೆ
ಕಾಗದ
ಇಡಿದರೆ ಖಾಲಿ ಹಾಳೆ  ..
ಕಾಗದದಮೂಲಕ
ಬೆಳಕ ನೋಡಿದರೆ  ..
ಅಜ್ಞಾತನ  ಆತ್ಮ ಕಥೆ !!!!

ಪ್ರತಿಪಲನಕ್ಕೆ ಕೆಲವೊಮ್ಮೆ
ಕನ್ನಡಿ ಬೇಡ ..
ಬೆಳಕೇ ಸಾಕು !!




ಭಾನುವಾರ, ಫೆಬ್ರವರಿ 1, 2015

ಹುಳಿ ಮಾವಿನ ಮರ ...

 ನನಗೆ ಮೊದಲಿನಿಂದಲು ಆತ್ಮ ಕಥನಗಳ ಬಗೆಗೆ ವಿಚಿತ್ರ ವ್ಯಾಮೋಹ , ಅಲ್ಲಿ ಸತ್ಯ, ಅರ್ಧ ಸತ್ಯ , ಬಿಟ್ಟು ಹೋದ ಸೂಕ್ಷಗಳು ಎಲ್ಲ ಇರುತ್ತವೆ . ಬರೆದವನ , ಬದುಕಿನವನ ಸಂಪೂರ್ಣ ಬದುಕಿನ ಚಿತ್ರ ಅಥವಾ ಅವನು ಬದುಕಬೇಕೆನ್ದಿದ್ದ ಬದುಕಿನ ಕಲ್ಪನೆಯೊ , ಒಟ್ಟಾರೆ ಅದೊಂದು ವ್ಯಕ್ತಿತ್ವದ ಅನಾವರಣ .

ಸ್ಟೀವ್ ಜಾಬ್ಸ್ , ಅಗಸ್ಸಿ, ಪ್ರೊತಿಮ ಬೇಡಿ , ಕುಶವಂತ್ ಸಿಂಗ್ ,ಕುಲದೀಪ್ ನಾಯರ್ , ಬೆಳೆಗೆರೆ ಕೃಷ್ಣ ಶಾಸ್ತ್ರಿ , ಐನ್ಸ್ಟೈನ್ , ಚಲಂ , ಸ್ವಾಮಿ ಯೋಗಾನಂದ , ಜಾನ್ ನ್ಯಾಶ್ , ರಾಮಕೃಷ್ಣ ಪರಮಹಂಸ , ರಾಧಾನಾಥ ಸ್ವಾಮೀಜಿ , ಮುಕುಂದೂರು ಸ್ವಾಮಿಗಳು , .. ಈಗೆ ಮುಗಿಯದ ಸಾಲು ಸಾಲು ಬದುಕುಗಳು ನನ್ನ  ಸ್ಮ್ರತಿಯಲ್ಲಿ ಸೇರಿಹೋಗಿವೆ    .
ಒಬಬ್ಬರದು ವಿಶಿಷ್ಟ  ಬದುಕು , ಹಲವಾರು  ಆಯಾಮಗಳು , ತಿಣುಕಾಟ , ಮೆರವಣಿಗೆ  .

ಬದುಕು ನೀಡುವ  ಸವಾಲು ಅದನ್ನು ಪ್ರತಿಯೊಬ್ಬರೂ ಎದುರಿಸಿದ ರೀತಿ , ಅವರ ಸೋಲು, ಗೆಲುವು , ಪ್ರೀತಿ , ವಿರಹ , ಸಂಭಂದಗಳು .. ಬಹು ಮುಖ್ಯವಾಗಿ ಎಲರಲ್ಲೂ ಸಾಮಾನ್ಯವಾಗಿ ಹುಟ್ಟುವ ಬದುಕಿನ ಅವಶ್ಯಕತೆ ಮತ್ತು ಸಾವಿನ ಅನಿವಾರ್ಯತೆಯ ಭಯ !! ಎಂತದೋ ವಿಚಿತ್ರ ಆಕರ್ಷಣೆ . ನನಗೆ ಇಷ್ಟವಾಗುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಆತ್ಮ ಕಥನ ಅಗ್ರ ಶ್ರೇಣಿಯದ್ದು .

ಈಗಗಿಯೇ ರವಿ ಬೆಳೆಗೆರೆಯವರ ಖಾಸ್ ಬಾತ್ , ಜೋಗಿಯವರ  ಜಾನಕಿ ಕಾಲಂ  ನನಗೆ ಇಷ್ಟವಾಗುತ್ತದೆ  ,ಬರವಣಿಗೆಗೆ ವಿಷಯ ನಾವೇ ಆದಾಗ ಬರವಣಿಗೆಗೆ ಒಂದು ಮೊನಪು , ತೀಕ್ಷತೆ ಮತ್ತು ವಾಸ್ತವಿಕತೆ ದಕ್ಕುತ್ತದೆ .  ಅಲ್ಲಿನ ಸುಳ್ಳುಗಳು ಉಹಾ ಪೋಹಗಳಗಿರುವುದಿಲ್ಲ ,ಅವು ತುಂಬಾ ಯೋಚಿಸಿ ಲೇಖಕ ಬೇಕಂತಲೇ ಸೃಷ್ಟಿಸಿದ gap fillerನಂತವು  ಅವನ್ನು   harmless ಎಂದು ಭಾವಿಸಿ ಉಳಿದ ಅನುಭವಗಳಲ್ಲಿ ಲೇಖಕನ ಬದುಕು ಕಾಣಬಹುದು  .

ಇನ್ನೊಬರ ಬದುಕ ಬಗ್ಗೆ ಕುತೂಹಲ ಯಾಕೆ ? ಈ ಭಾವನೆ ಹಲವಾರು ಬಾರಿ ಬಂದಿದ್ದು ಅದಕ್ಕೆ ನನ್ನದೇ ಆದ ಕಾರಣಗಳಿವೆ . ಮನುಜರು  ಹುಟ್ಟು , ದೇಶ , ಪರಿಸರ , ಆಕರ , ರೂಪು , ಧರ್ಮ ಇವುಗಳೆಲ್ಲದರ ನಡುವೆಯೂ ಒಂದು ಸಾಮ್ಯತೆ ಇದೆ . ಬಾಲ್ಯದ , ಯೌವನದ ,ಮಧ್ಯ ವಯಸ್ಸಿನ , ವ್ರದಾಪ್ಯದ ಆಗು ಹೋಗುಗಳಿಗು ಒಂದು ಸಾಮ್ಯತೆ ಇದೆ . ಬದುಕಿನುದ್ದಕು ಎದುರಾಗುವ ಪ್ರಶ್ನೆಗಳು , ಅವಕ್ಕೆ ಉತ್ತರಗಳ ಹುಡುಕಾಟ ಎಲದಕ್ಕು ಒಂದು ಸಾಮ್ಯತೆ ಇದೆ . ಈಗೆ ಯಾರದೋ ಬದುಕಿನ ಯಾವುದೋ ಘಟನಾವಳಿ , ಅದಕ್ಕೆ ಮತ್ತಾರೋ ಮಹಾತ್ಮಾ , ಬುದ್ದಿವಂತ ಪ್ರತಿಕ್ರಿಯಿಸಿದ ರೀತಿ ಇವೆಲ್ಲ ಸೂಕ್ಷ್ಮ ಮತಿಯ ಯಾವುದೋ ಮೂಲೆಯಲ್ಲಿ ಉಳಿದು , ಅಂತದೆ ಸಮಸ್ಯೆ ನಮಗೆ ಬಂದಾಗಲೋ , ನಮ್ಮ ಪ್ರಿಯ ವ್ಯಕ್ತಿಗಳಿಗೆ ಬಂದಾಗಲೋ ಉಪಯುಕ್ತವಾಗುತ್ತವೆ . ಒಟ್ಟಾರೆಯಾಗಿ ಮನುಜನಿಗೆ ದೈವ  ಒಡ್ಡುವ  ಎಲ್ಲ ಅನುಭವಗಳನ್ನು ಅನುಭವಿಸಲು , ಅಭ್ಯಸಿಸಲು ಈ  ಬದುಕು ತುಂಬಾ ಸಣ್ಣದು ಎನ್ನುವುದು ಸತ್ಯ ಹಾಗಾಗಿ ಮತ್ತಾರ ಬದುಕ ಸಾರಾಂಶಗಳನ್ನು ಓದುವುದು ಅದರಿಂದ ಪರಿ ಪಕ್ವವಾಗುವುದು ಒಂದು harmless  ಅಭಿಯಾನ !! I am guiltless to peek in to others life provided they write a book on it :)


ನಾನು ಲಂಕೇಶರನ ಓದಿ  ಕೊಂಡಿರಲಿಲ್ಲ   , ಅವರ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ರವಿ ಬೆಳೆಗೆರೆಯವರ ಉಲೇಖದ ಹೊರತಾಗಿ ನನಗೆ ಅವರ ಬಗ್ಗೆ ಯಾವುದೇ ಮಾಹಿತಿಯು ಇರಲಿಲ್ಲ .ಸಪ್ನಾ ಬುಕ್ ಹೌಸಿನಲ್ಲಿ ಅಕಸ್ಮಾತಾಗಿ ಕಣ್ಣಿಗೆ ಬಿದ್ದ "ಹುಳಿ ಮಾವಿನ ಮರ " ಖರೀದಿಸಿದೆ .
ಹುಳಿ ಮಾವಿನ ಮರ .. ಲಂಕೇಶರ ಆತ್ಮ ಕಥನ .

ಈ ಪುಸ್ತಕ ಅಥವಾ ಆ ಬದುಕು ನನ್ನನು ಅತಿ ಶೀಘ್ರವೇ ಆವರಿಸಿದ ಸಂಕೀರ್ಣ ಬದುಕಿನ ಒಂದು ಅಸಂಕಿರ್ಣ ಸಂಕಲನ .
ನಿಜಕ್ಕೂ ಅವರ ಬದುಕು ಅದರ ಪಾರದರ್ಶಕತೆ ನನ್ನನ್ನು ಯಾವ ಪರಿ ಆಕ್ರಮಿಸಿತು  ಎಂದರೆ ಒಂದು ದಿನದ ಓದಿಗೆ ಪೂರ್ತ ಪುಸ್ತಕ ಜೀರ್ಣವಾಗಿ ಹೋಯಿತು . ತನ್ನ ಬಗ್ಗೆ ತಾನು ತುಂಬಾ ಸಾಮನ್ಯನಂತೆಯು ಬರೆದುಕೊಂಡಿರುವ ಅವರ ಪ್ರಭುದ್ದತೆ ಪ್ರಶಂಸನೀಯ , ಒಬ್ಬ ಲೇಖಕನಿಗೆ ತನ್ನ ಹೊಗಳಿಕೊಳ್ಳುವುದು ಸುಲಭ ಆದರೆ ತನ್ನ  ಸೋಲುಗಳನ್ನು , ನ್ಯೂನತೆಗಳನ್ನು ಯಾವುದೇ ಅಂಜಿಕೆಯಿಲ್ಲದೆ ಒಪ್ಪಿಸುವುದಕ್ಕೆ ಒಂದು ಗಟ್ಟಿತನದ ವ್ಯಕ್ತಿತ್ವ ಬೇಕು , ಇದು ಬಹಳ ಇಷ್ಟವಾಯಿತು . ಲಂಕೇಶ್ ಎಂದರೆ ಪ್ರತ್ರಕರ್ತ ಎಂದಷ್ಟೇ ತಿಳಿದಿದ್ದ ನನಗೆ ಅವರ ಅಧ್ಯಾಪಕ ವೃತ್ತಿ , ಅವರ ಸಿನಿಮ ಸಾಹಸಗಳು , ರೈತನಾಗುವ ಹಪಹಪಿ ,ಮದ್ಯೆ ಮದ್ಯೆ ಜಾಗೃತವಾಗುವ ಅವರ ಗ್ರಹಸ್ತಾಶ್ರಮ ,ಕುಡಿತ , ಸಿಗರೇಟೆ ,ಜೂಜು , ಅವರ ಪ್ರೇಮಗಳು , ಸಂವೇದನೆಗಳು , ಬಂಡಾಯದ ಪತ್ರಿಕೋದ್ಯಮ ... ಆಹ್ !! ಪರಿಪೂರ್ಣ ಬದುಕು ...


ನಾನು ಹೆಮ್ಮೆ ಪಡುವ ಬದುಕಗಳಿಗೆ ಹೊಸದೊಂದು ಸೇರ್ಪಡೆಯಾಗಿದೆ . ಇನ್ನು  ಅವರ  ಸಾಹಿತ್ಯ ಬಾಕಿ ಇದೆ... ಅಲ್ಲಿ  ಅವರ ವ್ಯಕ್ತಿತ್ವ ಮತ್ತಷ್ಟು ಹುಡುಕಬೇಕಿದೆ .



ಶನಿವಾರ, ಜನವರಿ 31, 2015

ಮೂರ್ತಿಗಳು...

ಮನಸ್ಸ ವಿಹ್ವಲ
ಅನುಮಾನ ,
ಅವಮಾನ ..
ನನ್ನ  ಕೊಂದ
ಮೂರ್ತಿಗಳ
ಸಾಲು ಸಾಲು
ನಿಲ್ಲಿಸಿದ ಮೇಲೆ 
ಮಹಾ ಯುದ್ದ
ಮುಗಿಸಿದೆ  ...

ಮನಸ್ಸು ಪ್ರಶಾಂತ,
ಈಗ ..
ಸತ್ತ ನಾನು
ಮತ್ತೆ ಎದ್ದಿದೇನೆ ..,
ದೇವರ
ಜೊತೆ ಯುದ್ದ
ಕಹಳೆ ಮೊಳಗಿದೆ ...
ಅವನದು ಒಂದು
ಮೂರ್ತಿ
ಕೆತ್ತುತ್ತಿದೇನೆ ...

ಶುಕ್ರವಾರ, ಜನವರಿ 30, 2015

ಗುರುವಾರ, ಜನವರಿ 29, 2015

ಬೆಟ್ಟ

ಇಲ್ಲೊಂದು  ಬೆಟ್ಟ ,
 ಹತ್ತಿ ಆಕ್ರಮಿಸಿ
ದಾರಿಯ ಕಲ್ಲುಗಳೆಲ್ಲ
ಸವೆಸಿದ್ದೇನೆ ...
ತುದಿಯಲಿ ನಿಂತಾಗ
ಜಾರುವ ಭಯ
ಹೋಗುತ್ತಿಲ್ಲ ...!

ಕಾಡಿಗೆ

ಕಣ್ಣ ಕಾಡಿಗೆ ,
ಗುಂಗುರು ಕೂದಲು
ಎಲ್ಲಿ ಕಂಡರೂ
ಮನದ ಹಾಳು ಮಂಟಪದ
ಕೀಲಿ ಹುಡುಕಿ  ..,
ಅದೇ ಪ್ರೀತಿಯ
ಗೋರಿಯ ಮೇಲೆ ನೆಟ್ಟ
ಹೂಬಳ್ಳಿಯ
ನಾಲಕ್ಕು ಹೂವ ಪಡೆದು ,
ಒಳ ಹೊಕ್ಕಿ  ,

ಮೂರ್ತಿಯ ಕಂಡು ,
ಕಣ್ತುಂಬಿ ಕೊಂಡು ,

ವಿಗ್ನವಾದ ದೇವಿಗೆ
ಹೂವು ಮುಡಿಸಲಾರದೇ,
ಬಾಡುವವರೆಗೆ ಹೂವು
ಬಾಗಿಲಲ್ಲೇ ಕಾಯುತ್ತೇನೆ  ..,







ಮಂಗಳವಾರ, ಜನವರಿ 27, 2015

ಯುದ್ದ

ಹುಟ್ಟಿ  ಮರು ಕ್ಷಣ
ನಕ್ಷತ್ರಗಳ ಜೊತೆ
ಯುದ್ದಕ್ಕೆ ಬೀಳುವ ಚಂದ್ರ  ..,
ಸಾಲು  ಸಾಲು
ತಾರೆಗಳ ನಿಲ್ಲಿಸಿ ಕೊಂದು ,
ಹುಣ್ಣಿಮೆಯಾಗುತ್ತಾನೆ   ,
ಅಸಂಖ್ಯ ತಾರೆಗಳೆಲ್ಲ
ಒಟ್ಟಾಗಿ ಸೇರಿ ಚೂರು ಚೂರೇ
ಚಂದಿರನ ಮುರಿದು
ಅಮಾವಾಸ್ಯೆಯ ಮತ್ತೆ
ಪ್ರತಿಷ್ಟಾಪಿಸುತ್ತವೆ !!

ಆಕಾಶಕ್ಕೆ ಪ್ರತಿ ತಿಂಗಳು
ಚಂದಿರನ ಹೆರುವ ಕೆಲಸವಾಗಿದೆ !

ಕೆಂಪು

ಚೂಪು , ಕತ್ತಿಯ ಗರಿಮೆ ,
ಚಿಮ್ಮುವುದು ನೆತ್ತರ ಕರ್ಮ ..
ಕೊಯ್ಯುವ ಕೈಗೆ ಸಂಕಲ್ಪವಾದ ಮೇಲೆ ..,
ಕೆಂಪು ನನ್ನ ಬಣ್ಣ .... 

ಬುಧವಾರ, ಜನವರಿ 21, 2015

ಸೋಂಕು

ಸೋಂಕು ತಗುಲಿದ
ಎದೆ  .,
ಪೂರೈಸಲು

ಇಡಿ ರಾತ್ರಿ  ಮೊಗಲು
ಅದಲು ಬದಲು ,
ನಿದಿರೆ ಸೂತಕದ ಮನೆಯಂತೆ
ಘಮದಲ್ಲೇ ಬೇಯಿಸುತ್ತಿತ್ತು ,
ಬೆದರಿ , ಚದುರಿ
ಬಿಟ್ಟೂ ಬಿಡದ
ಬಿಡುಗಡೆಯ ಬಯಕೆ ... !

ಶುಶ್ರುಷೆಗೆ ಲಸಿಕೆ ??
ಹುಡುಕ ಹೊರಟೆ ..,

ನಾಟಿ ಮದ್ದು .,
ನಾಡ ಮದ್ದು ..,
ಅರಿತವರ ,
ನುರಿತವರ
ಕೇಳಿ ಪಡೆದೆ ..,
ಕಂಡವರ ,
ಉಂಡವರ
ಬೇಡಿ ಪಡೆದೆ ,

ಎದೆ ಮತ್ತೆ ಲಯದಲ್ಲಿ
ತೂಗುತಿದೆ ,

ಈಗ ಲಸಿಕೆಯ ಗುರುತ
ಶಪಿಸುತ್ತೇನೆ  ..
ಸೋಂಕು ಹೊರ ಹೋದ
ದಾರಿ ನೇವರಿಸುತ್ತ ..,





ಮಂಗಳವಾರ, ಜನವರಿ 13, 2015

ಚಳಿ

ಈ ಚಳಿಗೆ ತಂಗಳು
ಮಾಡುವ ತವಕ  ..,

ಹಸಿ ಕನಸು , ಬಿಸಿ ಕನಸು
ಹುಸಿ ಕನಸು
ಎಲ್ಲಕ್ಕೂ
ತಕ್ಷಣಕ್ಕೆ ಮೋಕ್ಷ :)

ಗುರುವಾರ, ಜನವರಿ 8, 2015

ಗೀಟು

ಭೇದ ಕಾಣದು ,
ಅವರ  ಉಸಿರು
ತಮ್ಮದೇ   ಮಂದಿರ ,
ಮಸೀದಿ ,ಚರ್ಚಿನ
ಆವರಣಕ್ಕೆ
ಬಂಧಿಯಾಗುತ್ತಿಲ್ಲ ,

ಅವರ ರಕ್ತಕ್ಕೂ
ನಿಲಿಯಿದೋ
ಹಸಿರಿನದೋ
ಕೆಂಪಿನ ವೈವಿದ್ಯವಿಲ್ಲ  ..,

ಅಳುವಾಗ , ನಗುವಾಗ
ಹೆರುವಾಗ , ಹೊರುವಾಗ

ಒಂದೇ ದಿರಸು  !!

ಎಲ್ಲರು ಮತೀಯರು
ಮತಿಯುಳ್ಳವರೆ .,
ಗಾಳಿಯಲ್ಲೆ
ನೀರಿನಲ್ಲೇ
ಒಂದಷ್ಟು ಗೀಟು
ಎಳೆಯುತ್ತಾರೆ ,
ಒಬ್ಬರಿಂದೊಬ್ಬರು
ದೂರ ನಿಲ್ಲುತಾರೆ ,
ಮೇಲೆ ನೋಡುತ್ತಾರೆ ., !!

ಪಾಲಗಲೇಬೇಕು
ವಾಂಛೆ ಏರಿ

ಅವನ ಸೋಕಿದ
ಬಿಸಿಲು
ಇವನ ಕೆಮ್ಪಾಗಿಸುತ್ತದೆ ,
ಇವನು ತೊಯಿಸೋ
ಮಳೆ ಅವನ
ತಮ್ಪಗಿಸುತ್ತದೆ ,

ಇಲ್ಲ !ಇಲ್ಲಿ
ಏನೋ ವೈಪರಿತ್ಯವಿದೆ ,
ಎಂದು ಗುನುಗುತ್ತಾ  ,
ಕಣ್ಣ ಇಗಲಿಸಿ ,
ಜೀವದ ಪರಿಧಿ
ಮೀರಿ ನೋಡುತ್ತಾರೆ .,
ಎದೆಯ  ಹಿಂಡಿ ,
ಭೇದದ  ಔನತ್ಯದ
ವರದ ಆಸೆಗೆ
ಜೀವಗಳ ಸಾಮ್ಯತೆ
ತೂರಿ  ನೋಡುತ್ತಾರೆ ..,

ಏನೋ ಸಿಕ್ಕಂತೆ
ಹೂಂಕರ ,
ಭಯದ ಚಿತ್ಕಾರ,
ಸಾವು !!??
ಸಾವ ಕಾಣುತ್ತಾರೆ !
ಭಯದಿ ವಿಹ್ವಲರಾಗಿ
ದೈವ ನೆನೆಯುತ್ತಾರೆ ..!

ಗಾಳಿಯ ಗೀಟಿಗೆ
ದೈವದ ಉರಿ ಕಟ್ಟಿ,
ಮೌನ ಹೋಗುತ್ತಾರೆ , ...
ಹಾ ..!
ಸತ್ಯ ದರ್ಶನ
ಎಲ್ಲರಿಗು !!!!


ಸಾವಿನಾಚೆಗೆ ಇದೆ
ಅವನಿಗೆ ನರಕ 
ನನಗೆ ಸ್ವರ್ಗ 
ಎಂದು 
ಮನಸೇ ನಕ್ಕು 
ಗೀಟ ಆಚೆಗೆ
ವ್ಯಂಗ್ಯ ಬೀರುತ್ತಾರೆ ...  


ಒಟ್ಟಾರೆ 
ಸಾವ ದಡಕ್ಕೆ
ದೋಣಿ ಕಟ್ಟಿ
ಉಳಿದವರು ಬೇಕು ,
ಸ್ವರ್ಗ , ನರಕದ
ಆಮಿಷದ
ಅನಾವರಣಕ್ಕೆ  ..,
ದೇವರ ಕರೆದು
ಮೊರೆದವರು ಬೇಕು
ವಿಪರ್ಯಾಸಗಳ
ನೀರ್ವಾಣಕ್ಕೆ ..


ಈ ನಡುವೆ
ಹುಡುಕುತ್ತಿರುವೆ
ದೇವರಿಗಿಂತ
ಅವನ ಕಂಡವರ
ಸಿಕ್ಕರೆ ಕಳಿಸಿಕೊಡಿ
ನಮ್ಮವನ ...
ನೀರು , ಗಾಳಿಯ
ಮೇಲೆ ಗಡಿಗಳ
ಕೆಡವಬೇಕಿದೆ ...










ಸೋಮವಾರ, ಜನವರಿ 5, 2015

ಹುಡುಕಾಟ

ನೀ ಪಕ್ಕವಿದಾಗ
ಬದುಕ ಹುಡುಕಾಟ 
ದಿನ , ರಾತ್ರಿ
ಸತ್ತು  ,
ಈಗ ??
ನಿನ್ನ 
ಕುರುಹು ಸಿಗದೇ
ಸಾವ ಹುಡುಕುತ್ತಿರುವೆ
ಬದುಕು ಮುಗಿಯದ
ಹೊತ್ತು  ..,