ಮಂಗಳವಾರ, ಮಾರ್ಚ್ 10, 2015

ಹೊಸದೊಂದು ಜನ್ಮ

ಮೇಜಿನ ಮೇಲಿನ ನಾಲಕ್ಕು ಖಾಲಿ ಹಾಳೆ ನನ್ನ ಅರ್ಥ ಮಾಡಿಕೊಂಡ ಅಹಮ್ಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹೊರಳುತ್ತವೆ , ನೀಳವಾದ ಉಸಿರು ನನಗೆ ಅರಿವಿಲ್ಲದಂತೆ ನನ್ನ ಬಿಟ್ಟು ದೂರ ಸರಿಯುತ್ತದೆ , ಕಿಟಕಿಯ ಆಚೆ ದಿಟ್ಟಿಸಿ ಮುಗಿದ ಮಳೆಯ ಅವಶೇಷಗಳ ನಡುವೆ ತೊಯ್ದ ಅಂಗವಿಕಲ ತರೆಗೆಲೆಗಳ ಅಸಹಾಯಕತೆ , ನಿಶ್ಚಲತೆ ಚೆಡಿಸಿದನ್ತಾಗಿ ದೃಷ್ಟಿ ಒಳಗೆ ಎಳೆದುಕೊಂಡು ನಿರ್ಲಿಪ್ತನಾಗುತ್ತೇನೆ ... ಎದುರಿನ ಗೋಡೆಗೆ ಮುಪ್ಪಾದಂತಿದೆ ,ಅಲ್ಲಲ್ಲಿ ನೇತು ಹಾಕಿದ ಹಳೆಯ ಫೋಟೋಗಳು , ನಾನು ಬೇಡವೆಂದು ಕಿತ್ತಿಟ್ಟ ಫೋಟೋಗಳು ಉಳಿಸಿ ಹೋದ ಮೊಳೆಗಳ ಗುರುತು , ಮೈಯೆಲ್ಲಾ ಗಾಯದ ಗುರುತ್ತಂತೆ ಎಡೆದು ಹೋದ ಸುಣ್ಣದ ಚಕ್ಕೆಗಳು , ಮತ್ತೆ ಇವು ನನ್ನ ನಾಳೆಯ ನೆನಪಿಸಿದೆ ....... ನಾನು ಖಾಲಿಯಾಗದ ಭಾವದ ಒರತೆಯಾಗಿದೆ , ಹರಿಯುತ್ತಾ ಸದಾ ತುಳುಕುತ್ತಿದೆ ಇಂದೇಕೆ ಹೀಗೆ ಖಾಲಿ ಭಾವ ? ಕನ್ನಡಕ ಹುಡುಕಿ ಮುಖಕ್ಕೆ ನೀರು ತಾಕಿಸಿ ಮೇಲೆದ್ದು , ಮನೆಯೆಲ್ಲ ಹುಡುಕಿ ಇಲ್ಲಿ ಬಂದವರ , ಇದ್ದವರ , ಹೋದವರ ಎಲ್ಲರ ನೆನಪು ತರಿಸುವ ಎಲ್ಲ ನಿಗೂಡ ಗುರುತುಗಳ ಹುಡುಕಿ ಸುಟ್ಟಿದೇನೆ , ಬಣ್ಣದಂಗಡಿಯಿನ್ದ ಹೊಸದಂದು ಬಣ್ಣ ಆರಿಸಿ ತಂದಿದ್ದೇನೆ , ಒಂದಷ್ಟು ಸೀಮೆಂಟ್ ಬಳಿದು ನಂತರ ಇಲ್ಲಿ ಬಣ್ಣ ಬದಲಿಸಿ ನನ್ನ ಶೈಥಿಲ್ಯದ ಸೂಚ್ಯದಂತ ಮನೆಯ ವಾಸ್ತು ಬದಲಿಸುತ್ತೇನೆ ... ನನ್ನ ಮನೆಯ ನಡುವಲ್ಲಿ ಇದ್ದ ಉದ್ದದ ಕನ್ನಡಿಯ ಹೊರಗಾಕ್ಕಿದ್ದೇನೆ ... ಈಗ ಇಲ್ಲಿ ಹೊಸದೊಂದು ಜನ್ಮವಾಗಿದೆ , ಇವನಿಗೆ ನೆನ್ನೆಯಿಲ್ಲ , ನಾಳೆಯಿಲ್ಲ , ಪರಿಚಯಸ್ತರಿಲ್ಲ , ಕಲಿತ ವಿದ್ಯೆಗಳೆಲ್ಲವನ್ನು
ತೊಳೆದ ಮೇಲೆ ಒಂದಷ್ಟು ಖಾಲಿ ಹಾಳೆಯ ಮೇಲೆ ಅಕ್ಷರಾಭ್ಯಾಸ ನಡೆಯುತ್ತಿದೆ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ