ಶುಕ್ರವಾರ, ಫೆಬ್ರವರಿ 20, 2015

ಆಸ್ತಿಕತೆ ಒಳ್ಳೇದು !!

ದೇವರ ನಂಬಿಕೆ , ಹುಡುಕಾಟ , ಸಾವ ಭಯ ಹಾಗು ಅದರೆಡಗಿನ  ತಿರಸ್ಕಾರ ಮನುಕುಲವನ್ನು  ಬಿಟ್ಟು ಬಿಡದೆ ಕಾಡಿದ , ಕಾಡುತ್ತಿರುವ , ಕಾಡುವ ಪ್ರಶ್ನೆಗಳು .ನಮ್ಮಲ್ಲಿ  ಎಲ್ಲಾ  ತತ್ವಗಳು ನಾಸ್ತಿಕತೆ ಮತ್ತು ಆಸ್ತಿಕತೆಯ ನಡುವೆಯೇ ಹಂಚಿಹೊಗಿವೆ . ನನ್ನ ಸ್ನೇಹಿತನೊಬ್ಬನ ಚಿಂತನೆಯಂತೆ ದೇವರು ಒಂದು ಬಗೆಹರಿಸಲಾರದ ಸಮೀಕರಣ , ಸಾಮಾನ್ಯರಿಗೆ ದೇವರ ಹುಡುಕಾಟದ ವಾಂಛೆ ಹುಟ್ಟಿದರೆ ಇಡಿ ಜೀವಮಾನ ಅವರು ಅದರ ಸುತ್ತ ತಿಣುಕಾಡುತ್ತಾರೆ , ಸೋಲುತ್ತಾರೆ , ಗೆಲ್ಲುತ್ತಾರೆ , ಬೀಳುತ್ತಾರೆ , ಏಳುತ್ತಾರೆ ಆದರೆ ಅವರು ಓಡಿ ಹೋಗುವುದ್ದಿಲ್ಲ , ಬಿರುಬಿಸಿಲಿನಲ್ಲಿ ನಿಲ್ಲುತ್ತಾರೆ ,  ಚಳಿಯ ಕೊರೆತ , ಮಳೆಯ ಬೀಸು , ಸಾವ ಕಳವು , ರೋಗ, ಮುಪ್ಪು ಹಸಿವು  ಮ್ ಮ್ ! ಯಾವುದು ಅವರ ಕಾಲ ಕೆಳಗಿನ ನೆಲ ಕಸಿಯಲಾರದು ಸಾಯುವ ಕಡೆಯ ಕ್ಷಣದವೆರೆಗೂ , ನಂಬಿಕೆ ನೀಡುವ ಅಭಯ ಅದರಲ್ಲೂ ದೈವದ್ದು ಅತೀ ದೂರ ಸಲಹುತ್ತದೆ.

ಇದಕ್ಕೆ  ಮೂಲ ಎಲ್ಲಿಂದ ಮನುಕುಲದ ಬೌದ್ದಿಕ ಪರಾಮರ್ಶೆ ಗಳು ಅಂದರೆ ವಿಜ್ಞಾನದ ಪರಿಧಿ ಎಲ್ಲಿ  ಮುಗಿಯುವುದೋ ಅಲ್ಲಿಂದ ದೈವದ ಅರಿವಿಕೆ ಮತ್ತು ವ್ಯಾಪ್ತಿಯ ಅವಲೋಕನ ಶುರುವಾಗುತ್ತದೆ , ಅದು ಹೇಗೆ ಮುಂದುವರೆಯುತ್ತದೆ , ಹೇಗೆ ಮುಗಿಯುತ್ತದೆ ಇದು ಅವರವರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟ ಸತ್ಯ  .

ಅನಂತಮೂರ್ತಿಯವರು ಒಮ್ಮೆ ಯಾವುದೋ ಸಂದರ್ಶನದಲ್ಲಿ ಹೇಳಿದ್ದು ನೆನಪು ದೇವರ ನಂಬಿದ ಅಥವಾ  ಹಾಗೆ ಅಂದು ಕೊಳ್ಳುಲು  ಪ್ರಯತ್ನಿದ  ಕೂಡಲೇ ಇಡಿ ಬದುಕಿನೆಡಗಿನ ದೃಷ್ಟಿಕೋನ ಮತ್ತು ಬದುಕುವ ರೀತಿ  ಬದಲಾಗುವುದು !! ಇದು ಅಕ್ಷರಶ: ನಿಜ , ದೇವರ ನಂಬದವರಿಗೆ ನೈತಿಕತೆ ಕೇವಲ ಮಾಡುವ ಕೆಲಸಕ್ಕೆ ಬೇಲಿಯಾದರೆ , ನಂಬಿದವರಿಗೆ ಭಾವನೆಗಳ, ಯೋಚನೆಗಳ ಸುತ್ತ ನೈತಿಕತೆ ಗಸ್ತು ತಿರುಗುತ್ತದೆ . ಒಂದು ವಿಧದಲ್ಲಿ ನೈತಿಕ ಸರಹದ್ದು ಮನಸ್ಸಿನ ಮಟ್ಟಿಗೆ ಇದ್ದರೆ ವ್ಯಕ್ತಿತ್ವ ಪಕ್ವವಾಗಬಹುದಾ ?? ಗೊತ್ತಿಲ್ಲ , ಆದರೆ ನಮ್ಮೊಳಗೇ ಬಿಟ್ಟು ಬಿಡದೆ ಒಂದು ಸಮರ ನಡೆಯುವುದಂತು ದಿಟ . ಎಷ್ಟೋ ಬಾರಿ ಮತ್ತೊಬ್ಬರೊಟ್ಟಿಗೆ , ಸಮಾಜದೊಟ್ಟಿಗೆ ಆಡುವ ಯುದ್ದಗಳಿಂದ ಹಾಗುವ ಹಾನಿಗಿಂತ ವಾಸಿ ಈ ಮನಸ್ಸು ಮತ್ತು ಬುದ್ದಿಯ ಕಾಳಗ.

ಇಲ್ಲಿ ನಾನು ಬಳಸಿದ ದೈವದ ಮೂರ್ತಕ್ಕೆ ಧರ್ಮದ ಅಂಕುಶ ಇಲ್ಲ , ರಾಮಕೃಷ್ಣರ ಮಾತಂತೆ ಎಲ್ಲ ಧರ್ಮಗಳು ಒಂದೇ ಗುರಿಯ ತಲುಪಲು ಹೋರಾಟ ಬೇರೆ ಬೇರೆ ರಸ್ತೆಗಳ?? ಇರಬಹುದು ಮನುಷ್ಯರೆಲ್ಲರಲ್ಲೂ  ಇರುವ ಸಾಮ್ಯ ಇದಕ್ಕೆ  ಸಾಕ್ಷ್ಯದಂತಿರುವುದನ್ನು ಅಲ್ಲಗೆಳೆಯಲಾರೆ . ಅವರೇ ಹೇಳಿದಂತೆ ತಾಯಿ  ಒಂದೇ ಪದಾರ್ಥದಲ್ಲಿ ತನ್ನ ಕುಟುಂಬದ ಪ್ರತಿಯೊಬ್ಬರಿಗೂ   ಮಾಡುವ ಅನನ್ಯ  ಭಕ್ಷ್ಯಗಳಂತೆ ಧರ್ಮ?? ಇರಬಹುದು , ಮತ್ತೆ ಅದೇ ಅವರವರ ಭಾವಕ್ಕೆ , ಅವರವರ ಭಕುತಿಗೆ .

ನಾನೇಕೆ  ಈ ವಿಷಯವಾಗಿ  ಇಷ್ಟೊಂದು ಹೇಳಿದೆ ??!  ನಾನು ನಂಬಿಕೆಯನ್ನು ಪ್ರತಿಪಾದಿಸುತ್ತಿಲ್ಲ , ಅಥವಾ ನಾಸ್ತಿಕತೆಯನ್ನು ಈಗಳೆಯುತ್ತಿಲ್ಲ . ನಾನು ಇತೀಚಿಕೆ ಎದುರುಗೊಂಡ ಕೆಲವು  ಘಟನೆಗಳ  ಬಗ್ಗೆ ವಿವರಣೆಗೆ ಮಾಡಿಕೊಂಡ ಸಣ್ಣ ಪೀಠಿಕೆ ಇದಷ್ಟೆ .

ಮೊದಲೆನೆಯದು .....

ಅವರು ಸುಮಾರು ೬೦ ವಯಸ್ಸಿನವರಿರಬಹುದು , ದಿನ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಹತ್ತುತ್ತಲೋ ಇಳಿಯುತ್ತಲೋ , ಲಲಿತ ಸಹಸ್ರ ನಾಮ ಓದುತ್ತ ಸಿಗುತ್ತಾರೆ . ತುಂಬಾ ಸಲ ನೋಡಿದ ಮೇಲೆ ಅವರೆಡೆಗೆ ಸಣ್ಣ ಕುತೂಹಲ ಮೂಡಿತು . ಕಳೆದ ವಾರ ಬೆಟ್ಟ ಇಳಿದು ಊರ ಕಡೆಗೆ ಹೊರಟಾಗ ದಾರಿಯಲ್ಲಿ ಅವರನ್ನು ಕಂಡೆ . ಸುಮ್ಮನೆ ನೋಡಿದೇ , ಮತ್ತೆ ಅವರ ಮಾತಾಡಿಸಲು ಸಂಕೋಚ , ಅವರೇ ಮಾತಾಡಿಸಿದರೆ ಸರಾಗ ಎಂದೆಣಿಸಿ ಅವರಿಗೆ ಹಿಂದಾಗಿ  ಒಂದೆರಡು ಹೆಜ್ಜೆಯಷ್ಟು ಜಾಗ ಕೊಟ್ಟು ನಡೆಯತೊಡಗಿದೆ . ಒಂದು ನೂರು ಮೀಟರು ನಡೆಯುಷ್ಟರಲ್ಲಿ ಅವರಿಗೆ ನನ್ನ ಬಗ್ಗೆ ಏನನಿಸಿತೋ ಏನೋ ತಿರುಗಿ ನೋಡಿ ಪರಿಚಯದ ನಗೆ ನಕ್ಕರು , ಅಷ್ಟಕ್ಕೇ ಕಾಯುತ್ತಿದ ನಾನು ಅವರನ್ನು ಮಾತಿಗೆಳೆದೆ .

"ನೀವು  ಇಲ್ಲೇ ಇರ್ತೀರಾ  ? ನಿಮ್ಮನ  ಇಲ್ಲೇ ಸುಮಾರ್ ಸಲಿ ನೋಡಿದೀನಿ " ನಾನು ಕೇಳಿದೆ . "ಹೌದು , ನಾನು ಇಲ್ಲೆಯೆ ಇರೋದು , ತಾಯಿ ನೋಡಕೆ ದಿನಾ ಬರ್ತೇನೆ  , ನೀನು?"   ತಮಿಳು  ಮಿಶ್ರಿತ ಕನ್ನಡಲ್ಲಿ  ಕೇಳಿದರು  , ನಾನು ಸಣ್ಣ ಹಾಗುವ ಭ್ರಮೆಗೆ ಬಿದ್ದು ಈ  ಬೆಟ್ಟ ಕಳೆದ ಆರು ವಾರದಿಂದ ಹತ್ತುತ್ತಿರುವುದಾಗಿಯು ಭಕ್ತಿ ಇನ್ನು ನೆತ್ತಿಗೆರಿಲ್ಲವೆಂದು ನಗೆ  ಬೀರಿದೆ . ನಂತರ ತನಗೆ ಕನ್ನಡದಲ್ಲಿ ಮಾತು ಕಷ್ಟವೆಂದು  ಇಂಗ್ಲಿಷಿಗೆ ಭಾಷೆ ಬದಲಿಸಿದ ಅವರು ನನ್ನ ಬಗ್ಗೆ  , ನನ್ನ ಕೆಲಸದ ಬಗ್ಗೆ ವಿಚಾರಿಸಿದರು .
ನಂತರ ನನ್ನ ಆತ್ಮ ಕಥನಗಳ ಕುತೂಹಲಕ್ಕೆ(  ಅಥವಾ ದೇವರ ಹುಡುಕಾಟದ ಬಗ್ಗೆ ಇರುವು ಕುತೂಹಲಕ್ಕೋ ಕಾಣೆ !) ಅವರ  ಬಗ್ಗೆ ಕೇಳಲಾರಮ್ಬಿಸಿದೆ .

ಅವರ ಹೆಸರು ಎಂತದೋ(ಮರೆತೇ! ) , ಪಾಲಕಾಡಿನ ಅಯ್ಯರ್ ಬ್ರಾಹ್ಮಣರೆಂದು ಹೇಳಿಕೊಂಡರು.  ಕಳೆದ ಮೂವತ್ತು ವರುಷ ಮುಂಬೈಯ ಯಾವುದೊ ಕಂಪನಿಯ ಕೆಲಸ , ಬದುಕಿನ ನೀರಸತೆಗಳು , ಈಗೆ  ತಮ್ಮ  ಮೂಲ ಬಿಚ್ಚಿಟ್ಟರು . ಕೊನೆಗೆ ಒಂದು ದಿನ ದೇವಿಯ ಕರೆ ಬಂದಂತೆ ಆಯಿತಂತೆ , ಅಲ್ಲಿಗೆ ಮುಂಬೈ ಮತ್ತು ಅಲ್ಲಿನ ತಮ್ಮ ಲೌಕಿಕ ಬದುಕಿನ ಅಂಟು ,ಆಸ್ತಿ , ಬಂಧುಗಳು ಎಲ್ಲ ತೊರೆದು  ಬಂದರಂತೆ . ಮೊದಲಿಗೆ ಕೊಲ್ಲೂರಿನಲ್ಲಿ ನೆಲೆಸಿ  ೯ ತಿಂಗಳು ಪೂಜೆ , ಜಪ ತಪಗಳಲ್ಲಿ ಲೀನವಾಗಿ ನಂತರ ಮೈಸೂರಿಗೆ ಬಂದಿದ್ದಾರೆ . ಇಲ್ಲಿ ಕಳೆದ ೫ ವರುಷಗಳಿಂದ ಬೆಟ್ಟದ ತಪ್ಪಲಿನ ದತ್ತ ಆಶ್ರಮದಲ್ಲಿ ಕೆಲವು ವರ್ಷ ಇದ್ದು  ಅಲ್ಲಿ ಆಶ್ರಮಜೀವನ  ದುಸ್ತಾರವಾಗಿ ಆಶ್ರಮ ಬಿಟ್ಟರಂತೆ . ಸಧ್ಯಕ್ಕೆ  ಯಾರದೋ ಮನೆಯಲ್ಲಿ ಪೇಯಿಂಗ್ ಗೆಸ್ಟಾಗಿ  ಇದ್ದಾರಂತೆ .
ಪ್ರತಿ  ದಿನ ಬೆಟ್ಟ ಹತ್ತಿ ದೇವಿಯ ದರ್ಶನ ಮಾಡುವುದು , ಲಲಿತ ಸಹಸ್ರನಾಮ ಜಪಿಸುವುದು ಇದು ನಿತ್ಯ ಕಾಯಕ  , ಇಲ್ಲಿ ದಿನಾಲೂ ಬರುವ ಪ್ರೇಮಿಗಳಿಗೆ , ವಾಯು ವಿಹಾರಿಗಳಿಗೆ ಇವರದು ತೀರ ಪರಿಚಿತ ಮುಖ .

ಮಾತು  ಮುಂದುವರೆಸಿ " ಹೆಂಡತಿ ಮಕ್ಕಳು ಸಂಸಾರ ?"ಎಂದೇ , "ಇಲ್ಲ , ಬದುಕ ಜಂಜಾಟಗಳ  ಮಧ್ಯೆ ಅದಕ್ಕೆ ಸಮಯವಾಗಲಿಲ್ಲ " ಎಂದರು .  ನಾನು ಅವರ ಸ್ವಾತಂತ್ರ , ಬಂಧಮುಕ್ತ ಬದುಕು ಮತ್ತು ಅದರ ಸ್ವೆಚೆಗೆ ಹೊಟ್ಟೆ ಕಿಚ್ಚು ಪಟ್ಟು "ಪುಣ್ಯವಂತರು  , ನೀವೇ  " ಎಂದೇ , ಯಾಕೋ ಒಂದೆರಡು ಸೆಕೆಂಡು  ಮೌನವಾದರು ನಂತರ  "ಬಂಧನಗಳು ಇರಬೇಕು  , ಬದುಕಿಗೆ ಒಂದು ಮಾನ್ಯತೆ ಇರುತ್ತದೆ "  ಅಂದರು .ನಾನು   ಗೊಂದಲಕ್ಕೆ ಬಿದ್ದೆ  ಯಾವ ಎಕಾಂತವಿದ್ದರೆ ಜೀವನದ ಅರ್ಥದ ಉತ್ಕಲನ ಸುಲಭ ಎಂದು ಭಾವಿಸಿ ಹಾತೊರೆಯುವವೆವೋ  ಆ ಏಕಾಂತವೂ , ಒಂಟಿತನವಾಗಿ , ನೀರಸವಾಗಿ ಕಾಣುವುದು ನನಗೆ ನೋವುಂಟು ಮಾಡಿತ್ತು .

ನಂತರ ಅವರು ಈ  ದಿನಗಳ ಮದುವೆ , ಸಂಬಂದಗಳ  ದೌರ್ಬಲ್ಯಗಳ  ಬಗ್ಗೆ ಕೆಲವು ತಮ್ಮದೇ ವ್ಯಾಖ್ಯಾನಗಳ  ನೀಡಿದರು . ತಮ್ಮ ಧ್ಯಾನ ,ಜಪ ತಪ, ಸಂಸ್ಕೃತದ  ಶಬ್ದದಿಂದ ಉಂಟಾಗುವ ಬೌದ್ದಿಕ ಬದಲಾವಣೆಗಳು , ಹೇಗೆ ಸಂಸ್ಕ್ರತದ ಅಕ್ಷರಗಳು ತುಂಬಾ ಶಕ್ತ ಎಂಬುವುದನ್ನು ಹೇಳಿದರು , ಇಂಗ್ಲಿಷಿನ " 7 habbits of highly effective people "ನ ಕೆಲವು ಉಲ್ಲೇಖಗಳನ್ನು  ಹೇಳಿ ಬದುಕು ಮತ್ತು ಅದರ  ಸಾರ್ಥಕ್ಯ ಎಷ್ಟು ಮುಖ್ಯ ಎಂದು ವಿವರಿಸಿದರು . ನಾನು ತೀರ ಉತ್ಸುಕನಾಗಿ ಮಾತಿಗೆಳದದ್ದು ಅವರಿಗೆ ಹಾಗಿರಬಹುದಾದ ದೈವಾನುಭುತಿಯ ಬಗೆಗಿನ ಕುತೂಹಲಕ್ಕೆ  ಆದರೆ ಅದನ್ನು ಹೇಗೆ ಕೇಳುವುದು ?? ಮುಜುಗರವಾಯಿತು  (ನನ್ನ ಪ್ರಕಾರ ಪ್ರತಿಯೊಬ್ಬರ  ಆಸ್ತಿಕತೆ  ,ನಾಸ್ತಿಕತೆಯ  ಮೂಲ ನಂಬಿಕೆಗಳು  ತೀರ ವೈಯುಕ್ತಿಕ !) , ಮಾತು ಮುಂದುವರೆಸಿದೆ .ಸುಮಾರು ಅರ್ಧ ಗಂಟೆ  ಅವರೊಡೆಗಿನ ಸಂವಾದ ಬರಿ ಲೌಕಿಕ ಹಾಗು ಹೋಗುಗಳ ಬಗ್ಗಿನ ಚರ್ಚೆಯಲ್ಲೆ ಕಳೆದೆ . ಕೊನೆಗೆ ಅವರೇ  ತಾವು ನಿದಿರೆಯಲ್ಲೂ ಹೇಗೆ ಜಪದಲ್ಲಿ ತಮ್ಮನು ತೊಡಗಿಸಿಕೊಂದಿರುವರೆಂದು , ಇನ್ನು ಕೆಲವೇ ವರುಷದಲ್ಲಿ ತಮ್ಮಗೆ ತಮ್ಮ  ಸಾಧನೆಗೆ ಪ್ರತಿಫಲ ದೊರಕಬಹುದೆಂದು ಹೇಳಿಕೊಂಡರು .
ಸಾಧನೆಯ ಹಾದಿಯಲ್ಲಿರುವ ಅವರಿಗೆ ಅಭಿನಂದಿಸಿ ಹೊರಡಲು ಅನುವಾದೆ , ನಂತರ  ಏನೋ ನೆನಪಾಗಿ  "ಊಟ  , ತಿಂಡಿ ಹೇಗೆ ??" ಎಂದೇ , "ನಾನು  ಯಾರನ್ನು  ಬೇಡುವುದಿಲ್ಲ , ಕೇಳುವುದಿಲ್ಲ , ಯಾರಾದರು ಏನಾದರು ಕೊಟ್ಟರೆ ಊಟ , ಇಲ್ಲವಾದರೆ ಹಸಿವು " ಎಂದರು  , ಅವರ  ಬಗ್ಗೆ ಹೆಮ್ಮೆ ಎನ್ನಿಸಿತು ಅವರ ಕೈಗೆ ಸಣ್ಣದೊಂದು ಮೊತ್ತವಿತ್ತು ಅವರ ಸಾಧನೆಗೆ ಶುಭ ಕೋರಿ ಅಲ್ಲಿಂದ  ಹೊರಟೆ .

ಮತ್ತೊಂದು  ಘಟನೆ ...

ಮೊನ್ನೆ ಬೆಳಗಿನ್ನ ರೈಲಿನನಲ್ಲಿ   ಬೆಂಗಳೂರಿಗೆ ಹೊರಟ್ಟಿದೆ , ಮಂಡ್ಯಾದಲ್ಲಿ ಹತ್ತಿದ ಒಬ್ಬ ಹುಡುಗ ಅಣೆಯಿಂದ ಮೂಗಿನಾರ್ಧದವರೆಗೆ ಒಂದು ನೀಳ ನಾಮಧರಿಸಿದ್ದ , ಬಿಳಿಯ ಬಟ್ಟೆ, ಕೈಯಲ್ಲಿ ಜಪ ಮಣಿಯ ಸಣ್ಣ ಕೈಚೀಲ , ತುಂಡು ಹೇರ್  ಕಟ್ ಒಂದು ವಿದವಾಗಿ  ಆ  ಬಾಲಕನ  ಮುಖದಲ್ಲಿ ಏನೋ  ಕಳೆ . ಪಕ್ಕದಲ್ಲಿ ಸೀಟಿನಲ್ಲಿದ ಒಬ್ಬ  ಹೆಂಗಸು ಆ  ಹುಡುಗನ ಕುರಿತು "ನೀನು ಜೋತಿಷ್ಯ ಹೇಳುತೀಯ ??"  ಎನ್ನುವವರೆಗೂ  ನಾನು  ಅವನನ್ನು  ಗಮನಿಸಿರಲೇ ಇಲ್ಲ . ಆಕೆಯ  ಕೆಲಿಗೆ ಭಯಗೊಂಡ ಬಾಲಕ " ಇಲ್ಲ ಇಲ್ಲ " ಎಂದು ನಿಟ್ಟುಸಿರು ಬಿಟ್ಟ .
ಮತ್ತೆ ನಾನು  ಅವನ ನೋಡಿ  ಪರಿಚಯದ ನಗೆ ಬೀರಿ "ಏನು  ಓದುತ್ತಿದಿಯ ?" ಎಂದೇ , ಆತ  "ಪ್ಯರಾಮೆಡಿಕಲ್ , ಮಂಡ್ಯದಲ್ಲಿ " ಅಂದ  . "ಎಸ್  ಎಸ್  ಎಲ್ ಸೀ ಯ ನಂತರವ " ಕೇಳಿದೆ , "ಇಲ್ಲ, ಪೀ ಯು ಸೀ " ಅಂದ . "ಇದೇನು ವೇಷ?ಕಾಲೇಜಿಗೂ ಈಗೇ  ಹೋಗ್ತಿಯ ?" ಅಂದೆ . "ಇಲ್ಲ , ಬೇರೆ ಸಮಯದಲ್ಲಿ ಮಾತ್ರ " ಅಂದ . "ಯಾವ ಮಠ ? " ಅಂದೆ . "ಇಸ್ಕಾನ್ " ಅಂದ . "ಮಂಡ್ಯಾದಲ್ಲು  ?  "  ಅಂದೆ ,  "ಹೌದು  , ವಿದ್ಯಾನಗರದಲ್ಲಿ , ಸಧ್ಯಕ್ಕೆ  ಮನೆಯಲ್ಲಿ ದೇವಸ್ಥಾನ  ಇದೆ , ಅಲ್ಲೇ  ಪೂಜೆ , ವಾಸ  ಎಲ್ಲ , ಈಗ ೪ ಎಕ್ಕರೆ ಜಮೀನು ಯಾರೋ ಕಲಹಳ್ಳಿಯಲ್ಲಿ ಕೊಟ್ಟಿದ್ದಾರೆ  " ಎಂದ . "ಎಷ್ಟು  ವಯಸ್ಸು ? " ಅಂದೇ  , "೧೭"  ಅಂದ . ನೋಡಲು  ಸುಮಾರು ೧೪ರ    ಹಾಗೆ ಕಾಣುವ ಅವನ ವಯಸ್ಸು ಕೇಳಿ ಆಶ್ಚರ್ಯವಾದದ್ದಂತು  ನಿಜ . " ಹೇಗೆ ? ಇದೆಲ್ಲ , ಎಷ್ಟು ವರ್ಷ ?" ಅಂದೆ . "ನನ್ನ  ಅಕ್ಕನಿಂದ  ಒಮ್ಮೆ  ಬೆಂಗಳೂರಿನ  ಶೇಷದ್ರಿಪುರಮ್ಮಿನ್ನಲಿ ಜಗನಾಥ ಮಂದಿರಕ್ಕೆ ಕರ್ಕೊಂಡು ಹೋದರು ಆಗಲಿಂದ ನಾನು ನಿಯತವಾಗಿ  ಕೃಷ್ನಾರಾಧನೆಯಲ್ಲಿ ನಿರತನಾಗಿದ್ದೇನೆ , ಈಗ  ೧೩ ವರುಷ ಒಟ್ಟು "  ನಾನು  ಅವಕ್ಕಾದೆ ", " ಮುಂದೆ ?" ಕೇಳಿದೆ . "ನನ್ನದೇ  ಒಂದು ದೇವಸ್ಥಾನ ಕಟ್ಟಬೇಕು , ಮುಂದಿನ ತಿಂಗಳು ಮಾಯಪುರಕ್ಕೆ ಹೋಗುತ್ತೇನೆ , ಅಲ್ಲಿ  ೬ ತಿಂಗಳು ಪೂಜಾ ವಿಧಿ ವಿಧಾನ ಕಲಿಸುತ್ತಾರೆ , ಮತ್ತೆ  ಅಲ್ಲೇ  ಬ್ರಹ್ಮಚಾರ್ಯ ತೆಗೆದುಕೊಳ್ಳುತ್ತೇನೆ " ಅಂದ , ನಾನು "ಮದುವೆ ? " ಅಂದೆ . "ಬ್ರಹ್ಮಚಾರ್ಯ ಅಂದೆ ಸನ್ಯಾಸ  ಅಲ್ಲ " ಅಂದ  . ನಾನು " ಓಹ್ !" ಎಂದು ಸುಮ್ಮನಾದೆ . ""ನಿನಗೆ , ಹೇಗೆ ಅನ್ನಿಸಿತು , ಹೀಗಾಗಬೇಕು ಎಂದು , ಏನು ಇಡಿದಿಡುತ್ತದೆ ನಿನ್ನನ್ನು  ಇಲ್ಲೇ ?" ಕೇಳಿದೆ . "ನಾನು , ಮೊದಲ ಬಾರಿ ದೇವಸ್ಥಾನಕ್ಕೆ ಹೋದಾಗಲೇ ಆ ಭಾವ ಮೂಡಿತು ಹಾಗಾಗಿ ಅಲ್ಲೇ ನೆಲೆಯೂರಿದೆ , ಭಗವದ್ಗೀತೆ ಎರಡು  ಮೂರು ಬಾರಿ ಓದಿದ ಮೇಲೆ ಇದರ ಹೊರತು ಬೇರಾವುದು ಹಿತವಿಲ್ಲ ಎನ್ನಿಸಿ , ಭಗವದ್ ಚಿಂತನೆಯಲ್ಲೇ ತೊಡಗಿಸಿಕೊಂಡಿದ್ದೇನೆ  " ಅಂದ . "ಏನು  ಕಲಿತೆ , ಗೀತೆಯಿಂದ ??" ಅಂದೆ  , ಆತ  ನನ್ನಿಂದ ಈ  ಪರಿಯ ವಿಚಾರಣೆ ಅಪೇಕ್ಷಿರಲಿಲ್ಲ ಎಂದು ಕಾಣುತ್ತದೆ ಕೊಂಚ ಕಸಿವಿಸಿಯದಂತೆ ಕಂಡ ನಂತರ "ನಾನು ಯಾವ  ಕಾರಣಕ್ಕೆ  ಇಲ್ಲಿ ಹುಟ್ಟಿದ್ದೇನೆ  ಎಂದು ತಿಳಿದಿದೆ ಅದಕ್ಕೆ  ಗೀತೆ  ಕಾರಣ  " ಎಂದ  . ಅಲ್ಲಿಗೆ  ನಿಟ್ಟುಸಿರು  ಬಿಟ್ಟು ನನ್ನ  ಪ್ರಶ್ನೆಗಳನ್ನು  ನಿಲ್ಲಿಸಿದೆ .

ಆತ  ಶ್ರೀರಂಗಪಟ್ಟಣದಲ್ಲಿ  ಇಳಿದು ಒಂದು ಬ್ಯಾಗಿನ ತುಂಬಾ ಇದ್ದ ಭಗವದ್ಗೀತೆಯ  ಪುಸ್ತಕಗಳ್ಳನ್ನು  ಇಡಿದು "ಗೋಸಾಯಿ  ಘಾಟ್ ಬಳಿ ,  ಗೀತೆ  ಮಾರಲು  ಹೋಗ್ತಿದೀನಿ " ಅಂತ  ಹೇಳಿ  ಇಳಿದು  ಹೋದ . ಇಳಿದ  ಮೇಲು  ಕಿಟಕಿಯಿಂದ ನನ್ನ ಕಡೆ  ಕೈ, ಬೀಸಿ ನಕ್ಕು  ಹೊರಟ , ನಾನು  ಅವನು ಹೋದ ದಾರಿಯ ಕಡೆ  ನೋಡುತ್ತ ಕೂತೆ , ರೈಲು  ಆತನ  ವಿರುದ್ದ ದಿಕ್ಕಲ್ಲಿ  ತನ್ನ   ಪಾಡಿಗೆ ಹೊರಟಿತು  .


ಈ ಎರಡು  ಘಟನೆ ನನ್ನನ್ನು ಒಂದೇ ಬಗೆಯಾಗಿ ಕಾಡುತ್ತಿವೆ , ದೇವರ ಬಗ್ಗೆಗಿನ ಕುತೂಹಲಕ್ಕೆ ಜೀವನವ  ಮುಡುಪಾಗಿಟ್ಟ ಬಾಲಕ ಮತ್ತು ದೇವರನ್ನು  ಪಡೆದೆ ತೀರುತ್ತೇನೆ ಎಂಬ ಆ  ವೃದ್ಧರ ಅಚಲತೆ ಎರಡು ವಿಶಿಷ್ಟ .
ಇಂತಹವರು  ಕೇವಲ ಉದಾಹರಣೆ ಅಷ್ಟೆ  , ಇಂತಹವರು  ಸಾವಿರಾರು ಮಂದಿ  , ನಮ್ಮ  ನಿಮ್ಮ  ಮಧ್ಯೆ ಕಾಣಸಿಗುತ್ತಾರೆ . ಇವರೆಲ್ಲರಲ್ಲೂ  ಒಂದು  ಶ್ರದ್ದೆಯಿದೆ , ತಾಳ್ಮೆಯಿದೆ , ಶಿಸ್ತು , ಸ್ಥಿರತೆಯಿದೆ  . ಅವರು  ಹುಡುಕ್ಕುತ್ತಿರುವುದು ಅವರಿಗೆ  ದೊರಕಲಿ ಎಂದು ಆಶಿಸುತ್ತ ನನ್ನ ಈ  ಸಣ್ಣ  ಲೇಖನ  ಮುಗಿಸುತ್ತೇನೆ . ಒಟ್ಟಾರೆ ಯಾವ ಕಾರಣಕ್ಕಾದರೂ  ಸರಿ , ವಿಜ್ಞಾನ , ಸಿನಿಮಾ , ಮಾಡುತ್ತಿರುವ ವೃತ್ತಿ, ಕುಟುಂಬ    ಯಾವುದಾದರು  ಸರಿ ಅದಕ್ಕೆ  ಜೀವನವ  ಮುಡುಪಾಗಿಡುವುದಕ್ಕೆ  ಒಂದು  ಗುಂಡಿಗೆ  ಬೇಕು , ಆ  ಗುಂಡಿಗೆಗೆ  ನನ್ನದೊಂದು  ನಮನವಿರಲಿ .



ಆಸ್ತಿಕತೆ  ಒಳ್ಳೇದು









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ