ಗುರುವಾರ, ನವೆಂಬರ್ 27, 2014

ಲೆಕ್ಕ

ದಿಗಿಲು ದಿಗಿಲು
ಬದುಕ ಒಡಲು .,

ಒಮ್ಮೆ ವಿಸ್ಮಯ , ಒಮ್ಮೆ ವಿಕೃತ
ನಿತ್ಯ ವಿಕ್ರಯವೆಸಗೋ
ಮಡಿಲು ..,

ಸರಸ ಬೆರೆಸಿ ,
ಮನವ ಮೆರೆಸಿ ..,
ಉಸಿರ ಸವೆಸುವ
ದೀರ್ಘ ಕಡಲು ..,

ಅಲ್ಲಿ ಜನನ ,
ಇಲ್ಲಿ ಜನನ,
ನಡುವೆ  ಅಣಕಿಸೊ ,
ಸಾವ ಗಣನ ..,

ಅಲ್ಲಿ ಬೆಳಕು ,
ಇಲ್ಲಿ ಬೆಳಕು
ಸರದಿಯಂತೆ
ಕತ್ತಲ ಮೆಲುಕು ..,  

ದೂರ ನಿಂತ
ರವಿಯ ಕಣ್ಣಲಿ  .,
ನಿತ್ಯವಿಲ್ಲಿ  ರಂಗಮಂಚ ..,
ಓಡಿ ,ಕುಂಟಿ ,ತೆವಳಿ
ಹುಗಿದು ಹೋದವು ಎಷ್ಟೋ .,, ??
ಸೀಳಿ ಬಗೆದು ತೆವಳಿ
ಜಿಗಿಯುತ್ತಿರುವವು ಅಷ್ಟೇ .., !!

ಲೆಕ್ಕಪತ್ರಕ್ಕೆ ಅವನೆ ರುಜುವು ..,












ಮಂಗಳವಾರ, ನವೆಂಬರ್ 25, 2014

ಸೂರ್ಯಾಸ್ತಮ...

ಇಂದು ಕಡೆಯ ಸೂರ್ಯಾಸ್ತಮ !!
ಇಡಿ ಊರೇ ದಿಗಿಲಿನಿಂದ ,ಆಶ್ಚರ್ಯದಿಂದ ಮುಗಿಲು ನೋಡುತ್ತ ನಿಂತಿದೆ , ನಿನ್ನೆಯವರೆಗೂ ಯಾವ ಸೂರ್ಯನ ಉದಯಾಸ್ತಮಗಳು ಉಸಿರಿನಷ್ಟೇ ನಿರಂಕುಶವಾಗಿತ್ತೋ  ಅದು ವಿಸ್ಮಯಕಾರಿ ರೂಪು ತಳೆದಿದೆ . ಜನ ಮಾನಸವೆಲ್ಲ ವಿಧ ವಿಧ ವಿಭಾಗವಾಗಿ ,ಒಂದಿಷ್ಟು ದುಃಖದಲ್ಲೂ , ಒಂದಷ್ಟು ವಿಸ್ಮಯದಲ್ಲೂ ,ಒಂದಷ್ಟು ಆಘತದಲ್ಲೂ ಹಂಚಿಹೊಗಿವೆ .
ಈಗೆ ಧಿಡೀರನೆ ಹಬ್ಬಿದ ಸುದ್ದಿ ಊರ ತುಂಬೆಲ್ಲ ಹರಡಿ ಎಲ್ಲರಲ್ಲೂ ಪ್ರಶ್ನೆಗಳು ಉಕ್ಕಿ ಹರಿದು ಅವುಗಳ ದಟ್ಟಣೆಗೆ ಅವೇ ನಲುಗುತ್ತಿವೆ  . ಮಂದಿರದ ಬಾಗಿಲ ಬಳಿ ಸೇರಿದ ಸಮೂಹ ಕಾಲ್ತುಳಿತಡ  ಆಟೊಟಕ್ಕೆ ನಲುಗಿ ದೇವರಿಗೇ ದರ್ಶನದ ಭಾಗ್ಯ ತಪ್ಪಿಸುವಂತೆ ಒಂದೇ ಒಂದು ಪ್ರಶ್ನೆಯು ತುಟಿಯ ದಾಟಿ ಬಾರದೆ ಗಂಟಲಿನ ಇಕ್ಕೆಲದಲ್ಲಿ ಚಡಪಡಿಸುತ್ತಿವೆ.
T V ಕಾರ್ಯಕ್ರಮದಲ್ಲಿ, ಅಂತರ್ಜಲದಲ್ಲಿ ಎಲ್ಲೂ ಕೂಡ ಇದರ ವಿವರವಿಲ್ಲದಿದ್ದರೂ ಜನ ನಂಬಿದಂತೆ ಕಂಡು ಬರುತ್ತಿದೆ.
ಈ ಸಂಜೆ ಸೂರ್ಯನದು ಕಡೆಯ ಸೂರ್ಯಸ್ತಮ ಎಂದು ಘೋಷಿಸಿದ್ದೆ ಸರಿ ,ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಮೋಡದಂತೆ ಮುಂದುವರಿದು ಊರ ಕೇರಿಗೆಲ್ಲ ಸುದ್ದಿ ಹಂಚಿದೆ. ಹಿಂದಿನ ರಾತ್ರಿ ಶಿವಾರಾತ್ರಿಯಾಗಿದದ್ದ ನೆನೆದು ಕಡುಕಪ್ಪು ಕತ್ತಲೆಯಲ್ಲಿ ಇಡಿ ರಾತ್ರಿಯ ಕಳೆದದ್ದರಿಂದ ಕತ್ತಲ ಬಗ್ಗೆ ಜನರಲ್ಲಿ ಸಣ್ಣ ಮಟ್ಟದ ಜಿಗುಪ್ಸೆ ಹುಟ್ಟಿದೆ , ಆ ಜಿಗುಪ್ಸೆ ಈಗ ಪರ್ವತಾಕಾರವಾಗಿ ಬೆಳೆಯುವ ಮುಂಸೂಚನೆ ಎಲ್ಲರಿಗು ಗೋಚರಿಸುತ್ತಿದೆ .


ಸವಿತ  ಮೆಲ್ಮಹಡಿಯಲ್ಲಿ ನಿಂತು ಅಕ್ಕ ಪಕ್ಕದ ಮನೆಯವರೊಡನೆ ಮಾತನಾಡಿಸುತ್ತ ನಿಂತಿದ್ದಾರೆ , ಗಂಡ  ಶೇಷಾದ್ರಿ  ಬ್ಯಾಂಕ್ ಉದ್ಯೋಗಿ ೨೦ ವರ್ಷಗಳ ಹಿಂದೆಯ ಬಿ ಎಸ್ಸಿ  ಮುಗಿಸಿದ್ದ ಅವರು ನುಗ್ಗಹಳ್ಳಿಯ ಕೆನರಾ ಬ್ಯಾಂಕಿಗೆ ವರ್ಗವಾಗಿ ಸರಿಯಾಗಿ ೨ ವರುಷ  . ಪಕ್ಕದ ಮನೆಯವರು ಹೆಂಡತಿ ಸವಿತಳಿಗೆ ಹೇಳುತ್ತಿದನ್ನು ಕೇಳಿಸಿದರು ಕೇಳಿಸದಂತೆ ನಿರ್ಲಕ್ಷಿಸಿ ಏನೋ ಓದುತ್ತ ಕುಳಿತಿದ್ದರು . ಓದುತ್ತಿದ  'ನಿರಾಕರಣ '  ಕಾದಂಬರಿಯ ನಾಯಕ ಹಿಮಾಲಯದ ತಪ್ಪಲಿನ ಹಳ್ಳಿಗಳಲ್ಲಿ ನಡೆಯುತ್ತಿದದ್ದು,  ಅವನ ಹುಡುಕಾಟದ ತಳಮಳ ,ಪರ್ವತಾರೋಹಣದ ದಣಿವು , ಕೊರೆಯುವ ಚಳಿಯ ಮೊನಚು ಎಲ್ಲ ಒಟ್ಟಾಗಿ ಛೇಡಿಸಿದಂತಾಗಿ ಮಹಡಿಯಮೇಲೆ ನಡೆಯುತ್ತಿರುವ , ನಡೆಯ ಬಹುದಾದ ವಿಸ್ಮಯಕ್ಕೆ ನೆರವಾಗುವಂತೆ ದಾವಂತವಾಗಿ ಮೆಟ್ಟಿಲು ಹತ್ತಿ ಮಹಡಿಗೆ ನಡೆದರು .ತಮ್ಮ ಒಟ್ಟು ೪೮ ವರುಷಗಳ ಜೀವಿತಾವದಿಯಲ್ಲಿ ಹಲವಾರು ಬಗೆಯ  ಮೌಡ್ಯಗಳನ್ನೂ  ,ಕಂದಾಚಾರಗಳ ನೋಡಿದ್ದರು. ಮನದಲ್ಲಿ ಓದಿದ ವಿಜ್ಞಾನವೆಲ್ಲ ಗುಂಪಾಗಿ ಬಂದು ಹಾಸ್ಯ ಮಾಡಿದಂತೆ ಅನಿಸಿದರೂ ತಾನು ನಾಳೆ ಹುಟ್ಟಿಬರುವ ಸೂರ್ಯನ ಮುಂದಾಗಿರಿಸಿ ತನ್ನ ಹೆಂಡತಿ ಮತ್ತು ಅಕ್ಕ ಪಕ್ಕದವರ ಪರಿಹಾಸ್ಯಮಾಡಲು ಸಾಕ್ಷ್ಯ ಸಂಗ್ರಹಕ್ಕೆ ಹೋಗುತ್ತಿರುವಂತೆ ಸಮರ್ಥಿಸಿ  ಕೊಂಡು ಒಂದು ಮೂಲೆಗೆ ಹೋಗಿ ನಿಂತದ್ದರು  .

"ಯಾರ್ ಹೇಳುದ್ರು , ಇನ್ಗಂತ ?"  ಸವಿತಮ್ಮ  ಪಕ್ಕದಮನೆಯ ಶ್ಯಮಲಳನ್ನ  ಕೇಳಿದರು ,"ನಾವು   ಸಾಮನ್ ತರಕ್ಕೋದಾಗ  ಅಂಗಡಿಲಿ ಮತಾಡ್ಕೊತ್ತಿದ್ದದು ಕೇಳಿಸ್ತು " ಅಂದ ಶ್ಯಾಮಲಾ  ಮತ್ತೆ ಆಕಾಶವನ್ನ ದಿಟ್ಟಿಸಿ ನೋಡ್ತಾ ನಿಂತರು .
"ಇದು ನಿಜಾನ , ಮತ್ತೆ ಟಿ ವಿ ಲಿ ಯಾಕೆ ಇದ್ರ ಬಗ್ಗೆ ನ್ಯೂಸ್ ಇಲ್ಲ ?ನಮ್ಮನೆಯವ್ರು  ಇಂಟೆರ್ನೆಟ್ನಲ್ಲು ನೋಡುದ್ರಂತೆ , ಅಲ್ಲೂ ಸುದ್ದಿ ಇಲ್ವಂತೆ ?! "  ಸವಿತಮ್ಮ ಮತ್ತೆ  ಶ್ಯಮಲಳೆಗೆಡೆಗೆ ದಿಟ್ಟಿಸಿದರು . ನಡೆಯುತ್ತಿರುವ ಅವಿಸ್ಮರಣೀಯ ಘಟನೆಯ ಕಣ್ತುಂಬಿಕೊಂಡು ಸೂರ್ಯನೇ ಇಲ್ಲದ ಪ್ರಪಂಚದಲ್ಲಿ ಮುಂದೆ ಹುಟ್ಟಿ ಬರುವ ತನ್ನ ಸಂತತಿಯ ಮುಂದೆ ನೆನಪು ಮೆರೆಯುವ ಆಸೆಗೆ ಮತ್ತೆ ಮತ್ತೆ ವಿಘ್ನವೆಸಗುತ್ತಿರುವ ಸವಿತಮ್ಮನ ಒಮ್ಮೆ ತೀಕ್ಷ್ಣವಾಗಿ ನೋಡಿ "ರೀ , ಅದೆಲ್ಲ ನನ್ಗೊತಿಲ್ಲ ನಾನ್ ಕೇಳಿದ ಮಟ್ಟಗೆ , ಇದನ್ನ ತಡಿಯೋಕಾಗಲ್ಲ ಅದನ್ನ ಜನಕ್ಕೆ ಗೊತ್ತಾಗೊ ಹಾಗೆ  ಮಾಡಿ ಹೆದರಿಸೋದ್ ಬಿಟ್ಟು ಹಾಗೆ ಇದ್ರೆ ಸರಿ ಅಂತ ಮಾಡಿದಾರಂತೆ  ,ಅದಕ್ಕೆ ಈ ವಿಚಾರ ಯಾರು ಸುದ್ದಿ ಮಾಡ್ತಿಲ್ಲ " ಅಂದು ಪುನಃ ಆಗಸ ದಿಟ್ಟಿಸುವ ಕಾರ್ಯಕ್ಕೆ ನಿಯತವಾದರು .

ಇತ್ತ ಶೇಷಾದ್ರಿ ನಡೆಯುತ್ತಿರುವ ಸಂಬಾಷಣೆ ಕೇಳಿ ಮೆಲ್ಲಗೆ ಯೋಚನಾ ಲಹರಿಗೆ ಜಾರಿದರು .
ಕಾಲೇಜಿನ ದಿನಗಳಲ್ಲಿ ಕಲಿತ ಭೌತಶಾಸ್ತ್ರ , ಗುರುತ್ವಾಕರ್ಷಣೆ , ಸೌರಮಂಡಲ , ಎಲ್ಲದರ ಮೆಲುಕು ಹಾಕಿ ಹೇಗೆ ಇದು ಸಾದ್ಯ ಎಂದು ಬಗೆ ಬಗೆಯಾಗಿ ಚಿಂತಿಸಿದರು . ಸೂರ್ಯನಿಗೆ ಮತ್ತು  ಭೂಮಿಯ ನಡುವೆ ಮತ್ತೊಂದು ಕಕ್ಷೆ  ಮೂಡಿ ಆ ಕಕ್ಷೆಯಲ್ಲಿ ಮತ್ತಾವುದೋ ಅಂತರಿಕ್ಷದ ವಸ್ತು ಸದಾ ಭೋಮಿಯೊಟ್ಟಿಗೆ ಸೂರ್ಯನ  ಗಿರಕಿ ಹೊಡೆದು , ಒಂದು ಅನಂತ ಗ್ರಹಣ ಮೂಡಿದರೆ ಮಾತ್ರ ಅದು ಸಾಧ್ಯವೆಂದು ತೋರಿತು ! ಆದರೆ ಸೂರ್ಯನ ಗುರುತ್ವಾಕರ್ಷಣೆ ಭೂಮಿಯ ಮೇಲೆ ವೈಪರಿತ್ಯವಾಗಿ ಅದರ ಪರಿಣಾಮ ಭೂಮಿಯ ಸರ್ವ ಅಣುಗಳ ಮೇಲು ಹಾಗಿ ಎಂತದು ಅನಿರ್ದಿಷ್ಟ  ಬಂದೆರಗಿದಂತೆ ಭಾಸವಾಯಿತು .

ಮತ್ತೊಮ್ಮೆ ಚೇತರಿಸಿಕೊಂಡ ಶೇಷಾದ್ರಿ ಕೆಂಪೆರುತ್ತಿರುವ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಾ ಅವನ   ಲಯಕ್ಕೆ ಮತ್ತೆ ಮಾರು ಹೋದರು , ಅವನ್ನ ಕಡು ಕೆಂಪು ಶರೀರ , ಅವನ ಬಿಳ್ಕೊಡಲು ಎಂಬಂತೆ ಸುತ್ತ ಅವನ ಕವಿದ ಮೋಡಗಳ ಹಾಸು , ಆ ಮೋಡಗಳ ಸೇರಲೆಂದು ಹಾರುವಂತೆ ಕಾಣೋ ಹಕ್ಕಿಗಳ ಸಾಲು , ಎದುರು ಮನೆಯ ಮತ್ತು ಹಿಂದಿನ ಮನೆಯ ಮುಂದಿನ  ತೆಂಗಿನ ಮರದ ಗರಿಗಳು ಗಾಳಿಗೆ ತೋಯ್ದು  ಮೂಡಿಸುತ್ತಿರುವ ಶಾರೀರ ಎಲ್ಲ  ಇಂದು  ಅಸಾದಾರಣವಾಗಿ ಕಾಣುತಿತ್ತು .

ಮತ್ತೆ ಪ್ರಜ್ಞೆ ಜಾಗ್ರ್ತವಾಗಿ , ಇಲ್ಲ ,ಎಲ್ಲಾದರು ಉಂಟೆ , ಎಲ್ಲ ಸುಳ್ಳು , ಸೂರ್ಯನ ಉಳಿವಿಕೆ , ಅವನ ಪ್ರಾಸ ಮತ್ತು  ಎರಡರ ಛಂದಸ್ಸು ನಿತ್ಯ ಸತ್ಯ ಯಾರೋ ಬುದ್ದಿ ಹೇಡಿಗಳ ಮಾತು  ನಾನ್ಯಾಕೆ ಈಗೆ ಮರುಗುತ್ತಿರುವೆ ಎಂದೆನಿಸಿ  ಮೈ ಕೊದರಿ ಹೆಂಡತಿಯ ಕಡೆ ನೋಡಿ "ಸವಿತಾ , ನಡಿಯೇ ರಘುನ ಏಳ್ಸು ,ಗಂಟೆ ೬ ಆಯಿತು , ಆ ಹುಡುಗ್ರು ಹಾಗೆ ಮಲಗಿವೆ , ಬೆಳಗ್ಗಯಿಂದ ಏನು ತಿಂದಿಲ್ಲ ಅವು , ನಡಿ " ಅಂತ  ಹೇಳಿದರು . ಹೆಂಡತಿ ತನ್ನ ಮಾತಿಗೆ ಕಿವಿಗೊಡದನ್ನು ಕೇಳಿ ಕೋಪ ಉಕ್ಕಿ ಬಂದು "ಲೇ , ನಡಿಯೇ ಕೆಳಕ್ಕೆ , ಹಾದಿ ಬೀದಿ ಮಾತು ಕೇಳಿ  ಬಾಳ್ಗೆಡ್ಸ್ ಬೇಡ " ಅಂತ ಗದರಿದರು .
ಪಕ್ಕದ ಮನೆಯಾಗೆ ಕೇಳಿಸದ ಹಾಗೆ ಗದರಿದರು , ಆಕೆಗೆ ಏನೋ ಅನಿಸಿ ಈ ಇಬ್ಬರು ಗಂಡ ಹೆಂಡಿರನು ಹೆಡ್ಡರ ಕಾಣುವಂತೆ ಕನಿಕರದಿ ನೋಡಿ ಮತ್ತೆ ಆಗಸಕ್ಕೆ ಕಣ್ಣಾದಳು .

ಇತ್ತ ಗಂಡನ ಮಾತು ಕೇಳಿ ಕೆಳಕ್ಕೆ ಇಳಿಯ ಬೇಕಾದ ಸವಿತಮ್ಮ ಮೆಟ್ಟಿಲು ಇಳಿದು  ತನ್ನ ಗಂಡನ ಮೇಲಿನ ಕೋಪವನ್ನು ಅವನಿಗೆ ತಿಳಿಯುವಂತೆ ಮತ್ತು ಆತ  ಪ್ರಶ್ನಿಸದಂತೆ ತೋರುತ್ತ ಮನೆಯ ಒಳ ಹೊಕ್ಕಳು .

                                                                                                                 (ಮುಂದುವರಿಯುವುದು )
                     






















ಶನಿವಾರ, ನವೆಂಬರ್ 15, 2014

ಗಾಯ!!

ಹುಸಿ ಗಾಯ
ಹಸಿ ಗಾಯ
ಮಾಸಿ ಮುಗಿದರು
ನುಸುಳಿದ  ಗಾಯ ,

ಮುಗಿದ ಗಾಯ ,
ಮಾಗಿದ ಗಾಯ ,
ಹುಗಿದು ಮರೆತು
ಹಗೆದು ತೆಗೆದ  ಗಾಯ ,

ಜರಿದ ಗಾಯ
ಹಗೆಯ ಗಾಯ
ಒಣ ಮನವ
ಕೊರೆದು ಭಿರಿದ ಗಾಯ ..,

ಮೌನದ ಗೋಡೆಗಳ
ಮೇಲೆ
ಮಾತು  ಮೂಡಿಸಿದ
ಗಾಯ ..,
ಮಾತಿನ ಮಂಟಪಕ್ಕೆ
ಮೌನ ಇರಿದ
ವಿಗ್ನ ಗಾಯ ..,

ಸಾವ ಮರೆಸಿದ
ಗಾಯ
ಮರೆವ ಕೊಂದ
ಗಾಯ ..,

ನೆನಪ ಹಾದಿ ಸವೆಸಿ
ಮೊಣಕಾಲ ಕೀಲ
ನಲುಗಿಸಿದ ಗಾಯ ..,

ಮನದ ಮೇಲೆ
ಗಾಯ
ಮನದ ಒಳಗೆ
ಗಾಯ ..,

ಈ ಜೀವದ
ಅಣು ಅಣುವಲು
ಗಾಯ ..,


















ಗುರುವಾರ, ನವೆಂಬರ್ 6, 2014

ಯಾಕಿ ಮೌನದ ಮುನಿಸು !

ಯಾಕೀ ಮೌನದ
 ಮುನಿಸು??

ಮಾತ ಅಳೆದು
ಅಳೆದು ,
ಸುರಿದು 
ನಾ ಬರಿದು 
ಬರಿದು .., 

ಎಂತ ದಾವು 
ನಿನ್ನದು ??

ಯಾಕಿ ಮೌನದ
ಮುನಿಸು ..

ಸುತ್ತ ನೋಡಿ
ಸದ್ದ ಮಾಡಿ
ಒಮ್ಮೆ ಗುನುಗ
ಬಾರದೆ ..

ಜಿನುಗೋ
ಪ್ರಾಣ ಒಮ್ಮೆ
ಜಿಗಿಸಿ ಮನವ
ತೊಯ್ಯಬಾರದೆ ??

ಯಾಕಿ ಮೌನದ
ಮುನಿಸು ..,

ಕಣ್ಣು ಕರಗಿ
ನೆಲವು ಜರುಗಿ
ಸಣ್ಣ ತೊರೆಯೆ
ಹರಿದಿದೆ ..,
ಒಮ್ಮೆ ಈಜ ಬರದೆ ..,
ಭವದ ಎಲ್ಲ
ಭಯವ ಮರೆತು
ಒಮ್ಮೆ ಮೀಯಬಾರದೆ ..,

ಭಾವ ತಾಕಿ
ಮನಸು ಜೀಕಿ
ನಿನ್ನದು ನಲಿವುದೇ ..!

ಮುನಿಸ ಮರೆತು
ಮೌನ ತೊರೆದು
ಒಮ್ಮೆ ಗುನುಗಬಾರದೆ ..,
ಒಮ್ಮೆ ಮರಳಬಾರದೇ ..,


ಯಾಕಿ ಮೌನದ ಮುನಿಸು ,
ಯಾಕಿ ಮೌನದ ಮುನಿಸು,